ಮೈಸೂರು-ಮಹಿಳಾ ಶಿಕ್ಷಣ ಪದ್ಧತಿಗೆ ಮುನ್ನುಡಿ ಬರೆದ ಮಹಾತಾಯಿ ಸಾವಿತ್ರಿ ಬಾಯಿ ಫುಲೆ-ಕೆ ರಘುರಾಮ್ ವಾಜಪೇಯಿ

ಮೈಸೂರು:ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಪಟ್ಟ ಶ್ರಮ ಸ್ಮರಣೀಯ’ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಹೇಳಿದರು.

ನಗರದ ಚಾಮರಾಜಪುರಂನ ವಿಷ್ಣುವರ್ಧನ ರಸ್ತೆಯಲ್ಲಿರುವ ಕಚೇರಿಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣ ಪದ್ಧತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡಿದ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಪರಿಣಾಮ ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಲು ಕಾರಣವಾಗಿದೆ’ ಎಂದು ಹೇಳಿದರು.

ನಂತರ ಮಾತನಾಡಿದ ಸಮುದಾಯ ಕಲಿಕಾ ಕೇಂದ್ರದ ಶಿಕ್ಷಕ ಸತೀಶ್ ಮೇತ್ರಿ,ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುತ್ತವೆ ಎಂಬ ಘೋಷಣೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಸಾಕಷ್ಟು ಹೋರಾಟ ಮಾಡಿದರು. ಪ್ರತಿವರ್ಷ ಫುಲೆ ಅವರ ಜನ್ಮದಿನವನ್ನು ‘ಶಿಕ್ಷಕಿಯರ ದಿನ’ವನ್ನಾಗಿ ಆಚರಿಸಿದಲ್ಲಿ ಹೆಚ್ಚಿನ ಅರ್ಥ ಸಿಗಲಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ಹಿರಿಯ ಶಿಕ್ಷಕಿ ಸುಶೀಲ ರಾವ್, ಶಿಕ್ಷಕರಾದ ಸತೀಶ್ ಮೇತ್ರಿ, ಸುಚಿಂದ್ರ, ಜಿ ರಾಘವೇಂದ್ರ, ಮಹಾನ್ ಶ್ರೇಯಸ್, ಮಂಜುನಾಥ್, ಹಾಗೂ ವಿವಿಧ ಶಾಲೆಯ ಶಿಕ್ಷಕಿಯರು ಹಾಜರಿದ್ದರು.

———-ಮಧುಕುಮಾರ್

Leave a Reply

Your email address will not be published. Required fields are marked *

× How can I help you?