ಮೈಸೂರು-ಶಾಹಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ-ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು-ಡಾ.ಅಂಬಿಕಾ ನಜರತ್

ಮೈಸೂರು-ನಗರದ ಉದಯಗಿರಿಯ ಶಾಹಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವವನ್ನು ರಂಗಾಚಾರ್ಲು ಪುರಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಟ್ಲ್ ಇನ್‌ಫೆಂಟ್ ಸ್ಕೂಲ್‌ನ ಸಂಸ್ಥಾಪಕರಾದ ಡಾ.ಅಂಬಿಕಾ ನಜರತ್ ರವರು ಜ್ಯೋತಿ ಬೆಳಗಿಸಿ ಮಾತನಾಡಿ, ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಬದುಕನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಿರಿದು, ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಅವರನ್ನು ಸುಂದರ ವ್ಯಕ್ತಿತ್ವವನ್ನಾಗಿ ರೂಪಿಸುವುದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯವಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಛಾಯಾದೇವಿ ಶಿಕ್ಷಣ ಸಂಸ್ಥೆಯ ಪ್ರಾoಶುಪಾಲರಾದ ಡಾ.ಆಂಥೋಣಿ ಪಾಲರಾಜ್ ಮಾತನಾಡಿ, ಪೋಷಕರೇ ಮಕ್ಕಳಿಗೆ ಸಮಯ ಕೊಡಿ, ಮಕ್ಕಳನ್ನು ಪ್ರೀತಿಸಿ, ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬೇಡಿ ಇದು ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಬಿಡುವಿನ ಸಮಯದಲ್ಲಿ ರಜೆಯ ಸಮಯದಲ್ಲಿ ಮಕ್ಕಳೊಂದಿಗೆ ಪ್ರೀತಿ ತೋರಿಸಿ, ಅವರೊಂದಿಗೆ ಹೆಚ್ಚು ಕಾಲಕಳೆದಾಗ ಮಕ್ಕಳಿಗೂ ಕೂಡ ತಂದೆ ತಾಯಿಯ ಬಗ್ಗೆ ಮತ್ತಷ್ಟು ಪ್ರೀತಿ, ಗೌರವ ಹೆಚ್ಚುತ್ತದೆಂದು ತಿಳಿಸಿದರು.

ಮಮ್ಮಿ, ಡ್ಯಾಡಿ ಆಗದೆ ಪ್ರತಿನಿತ್ಯ ಪ್ರೀತಿಯ ತಂದೆ-ತಾಯಿಗಳಾಗಿ, ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವಲ್ಲಿ ನೇರವಾಗಿ ನೆರವಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಹಿ ಹಿರಿಯ ಪ್ರಾಥಮಿಕ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಸುಸ್ಮಿತ,ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಆದ್ದರಿಂದ ಮಕ್ಕಳು ಶಿಕ್ಷಣ ಕಲಿಯುವಲ್ಲಿ ಶಾಲೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸಬೇಕು. ಮಕ್ಕಳಿಗೆ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದನ್ನು ಮೊದಲು ಗುರುತಿಸಿದರೆ ಮಕ್ಕಳ ಪ್ರೋತ್ಸಾಹಕ್ಕೆ ಸಹಕಾರಿಯಾಗುತ್ತದೆಂದು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಯರಾದ ರಾಜು, ಕಾರ್ಯದರ್ಶಿಗಳಾದ ಪ್ರಶಾಂತ್, ಸಮಾಜ ಸೇವಕಿ ಶ್ರೀಮತಿ ನಿಕತ್ ಅರಾ ಹಾಜರಿದ್ದರು.

ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

Leave a Reply

Your email address will not be published. Required fields are marked *

× How can I help you?