ಮೈಸೂರು:ಶತಮಾನದ ಹಿಂದೆಯೇ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಯೋಜನೆ ರೂಪಿಸಿದವರು ತಾತಯ್ಯನವರು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಸ್ಮರಿಸಿದರು.
ವೃದ್ಧಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ನವರ180 ನೇ ಜಯಂತಿ ಅಂಗವಾಗಿ ಮೈಸೂರು ನಗರಪಾಲಿಕೆ ಹಾಗು ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಸಂಸ್ಥಾನದ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕು ಅದರೊಂದಿಗೆ ಸಮಾಜದಲ್ಲಿ ಸಮಾನತೆ, ಮಹಿಳಾ ಪ್ರಾತಿನಿಧ್ಯ,ಮೌಲ್ಯಯುತವಾದ ವಾತಾವರಣ ಹೆಚ್ಚಾಗಲು ಶೈಕ್ಷಣಿಕ ಸಾಂಸ್ಕೃತಿಕ ಯೋಜನೆಯ ಮುನ್ನುಡಿ ಬರೆದವರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯರವರು ಎಂದರು.
ಮಹಾತ್ಮ ಗಾಂಧೀಜಿ ರವರು ಮೈಸೂರಿಗೆ ಬಂದಾಗ ತಾತಯ್ಯ ರವರನ್ನ ದಿ ಓಲ್ಡ್ ಮ್ಯಾನ್ ಆಫ್ ಮೈಸೂರ್ ಎಂಪೈರ್ ಎಂದು ಬಣ್ಣಿಸಿದ್ದರು.
ತಾತಯ್ಯನವರು ಸ್ವತಃ ಶಿಕ್ಷಕರೇ ಆಗಿದ್ದರು.ಅವರು ಸುಬ್ಬರಾಯನಕೆರೆ ಪಕ್ಕದಲ್ಲಿ ಕಟ್ಟಿದ ಅನಾಥಾಲಯದಲ್ಲಿ ಮತ್ತು ಚಾಮುಂಡಿಪುರಂನಲ್ಲಿ ದಾನ ನೀಡಿದ ಬಾಲಬೋಧಿನಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಹಸ್ರಾರು ಮಂದಿ ಇಂದು ವಿಶ್ವದ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಮ್ಮೆಯ ವಿಚಾರ ಎಂದು ಶಾಸಕ ಟಿಎಸ್ ಶ್ರೀವತ್ಸ ಹೇಳಿದರು.
ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸುಂದರೇಶನ್ ಮಾತನಾಡಿ ಮುಂದಿನ ವರ್ಷದಿಂದ ಪುರಭವನದಲ್ಲಿ ತಾತಯ್ಯನವರ ಜಯಂತಿ ಆಚರಿಸಲು ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮುಂದಾಗಬೇಕು.ಸಮಾಜದಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ ಗುರುತಿಸಿ ತಾತಯ್ಯ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಕೆ. ರಾಘುರಾಂ ವಾಜಪೇಯಿ ಮಾತನಾಡಿ ತಾತಯ್ಯನವರ ಉದ್ಯಾನದಲ್ಲಿ ವಾಚನಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಲಿಕಾ ಪುಸ್ತಕ ಭಂಡಾರ ನಿರ್ಮಿಸಲು ನಗರಪಾಲಿಕೆ ಮುಂದಾಗಲಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಶಾಸಕ ಟಿಎಸ್. ಶ್ರೀವತ್ಸ, ನಗರಪಾಲಿಕೆ ಆಯುಕ್ತ ಅರ್ಷದುಲ್ಲಾ ಷರೀಫ್, ವಲಯ ಉಪ ಆಯುಕ್ತರಾದ ಪ್ರಭಾ, ಇಂಜಿನಿಯರ್ ತೇಜಸ್ವಿನಿ, ಕೆ. ರಘುರಾಂ ವಾಜಪೇಯಿ, ಸುಂದರೇಶನ್, ಜೋಗಿ ಮಂಜು ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಹೇಮಲತಾ, ಸೌಭಾಗ್ಯಮೂರ್ತಿ,ಡಾ. ಲಕ್ಷ್ಮಿ,ಶಾಂತರಾಜು,ಕೃಷ್ಣಪ್ಪ,ಸತೀಶ್ ಭಟ್,ಮಂಜುನಾಥ ಹೆಗ್ಡೆ, ಶ್ರೀಧರ್,ರಂಗನಾಥ್,ವೆಂಕಟೇಶ್ ಇದ್ದರು.
——————–-ಮಧುಕುಮಾರ್