ನಾಗಮಂಗಲ:ಕೆಂಬಾರೆ ಅಂಗನವಾಡಿ ಕೇಂದ್ರಕ್ಕೆ ಬೀಗ-ಕೃಷಿ ಸಚಿವರ ಕ್ಷೇತ್ರದಲ್ಲೇ ಅಧಿಕಾರಿಗಳ ಕಳ್ಳಾಟ-ಕೂಲಿಯಿಲ್ಲದೆ ಮಹಿಳೆಯರ ಬದುಕು ನರಕ

ನಾಗಮಂಗಲ:ಇದು ವ್ಯವಸ್ಥೆಯ ದುರಂತ.ಅತ್ಯಂತ ಅಗತ್ಯವಾದ ಅಂಗನವಾಡಿ ಕೇಂದ್ರಕ್ಕೆ ಸರಕಾರ ಬೀಗ ಜಡಿದು ಕುಳಿತಿದ್ದು ಪೋಷಕರು ಪರದಾಡುವಂತಹ ಸ್ಥಿತಿ ಕೆಂಬಾರೆ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೂಪ ಎಂಬುವವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ ನಂತರ ಮತ್ತೊಬ್ಬ ಕಾರ್ಯಕರ್ತೆಯನ್ನು ನೇಮಕ ಮಾಡದೇ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ.ಈ ಕಾರಣಕ್ಕೆ ಶಿಕ್ಷಣವು ಇಲ್ಲದೆ,ಪೌಷ್ಟಿಕ ಆಹಾರಗಳು ದೊರೆಯದೆ ಬಹಳಷ್ಟು ಕಂದಮ್ಮಗಳು ಬಳಲುತ್ತಿವೆ.

ಅಂಗನವಾಡಿ ಕೇಂದ್ರಗಳಿಗೆ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳೇ ಬರುತ್ತಾರೆ.ಈ ಕೇಂದ್ರ ಬೀಗ ಹಾಕಿದ ದಿನದಿಂದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸಕ್ಕೆ ಹೋಗಲಾಗದೆ ಮಕ್ಕಳ ಪಾಲನೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಗೊಂಡಿದೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಮಹಿಳೆ ಜಯಲಕ್ಷ್ಮಿ,ಕಳೆದ ನಾಲ್ಕು ತಿಂಗಳಿನಿಂದ ನಮ್ಮ ಊರಿನ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗಿದೆ.ಬಹಳಷ್ಟು ಜನ ನಾಯಕರಿಗೆ ಈ ಅಂಗನವಾಡಿ ಕೇಂದ್ರ ತೆರೆಯುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.ಮಕ್ಕಳಿಗೆ ಸರಕಾರ ನೀಡುವ ಪೌಷ್ಟಿಕ ಆಹಾರಗಳು ಸಿಗದೇ ಅವು ಅಪೌಷ್ಟಿಕತೆಯಿಂದ ಬಳಲಿ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.

ನಾವು ಕೂಲಿ ಮಾಡಿದರೆ ಮಾತ್ರ ನಮ್ಮ ಮನೆಯ ಒಲೆಗಳು ಉರಿಯುತ್ತವೆ.ಅಂಗನವಾಡಿ ಮುಚ್ಚಿದ ದಿನದಿಂದಲೂ ಕೂಲಿಗೆ ಹೋಗಲು ಸಾಧ್ಯವಾಗಿಲ್ಲ.ಚಿಕ್ಕಮಕ್ಕಳು ಆಟವಾಡುತ್ತ ಮುಖ್ಯರಸ್ತೆಗೆ ಹೋಗುವ ಅಪಾಯವಿದ್ದು ವಾಹನಗಳಿಗೆ ಸಿಲುಕಿದರೆ ಎಂಬ ಭಯದಿಂದ ನಾವೇ ಕಾಯ್ದು ಕುಳಿತುಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿ ಹಾಗು ಬಾಣಂತಿ ಮಹಿಳೆಯರಿಗೂ ಸಹ ಪೌಷ್ಟಿಕ ಆಹಾರಗಳು ಮತ್ತು ಇತರೆ ಸವಲತ್ತುಗಳು ಇದೆ ಕಾರಣಕ್ಕೆ ಲಭ್ಯವಾಗಿಲ್ಲ.ಸಂಬಂಧಪಟ್ಟವರು ಆದಷ್ಟು ಶೀಘ್ರ ಈ ಅಂಗನವಾಡಿಗೆ ಕಾರ್ಯಕರ್ತೆಯೊಬ್ಬರನ್ನು ನೇಮಕ ಮಾಡುವಂತೆ ಜಯಲಕ್ಷ್ಮಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕೆಂಬಾರೆಯ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 25 ಮಕ್ಕಳು,ಇಬ್ಬರು ಬಾಣಂತಿಯರು ಹಾಗು ಮೂರು ಮಂದಿ ಗರ್ಭಿಣಿಯರು ಇದ್ದಾರೆ.

ಆದಷ್ಟು ಶೀಘ್ರ ಅಧಿಕಾರಿಗಳು ಕಣ್ತೆರೆದು ಈ ಸಮಸ್ಯೆಗೊಂದು ನಾಂದಿ ಹಾಡುತ್ತಾರಾ? ಕಾದು ನೋಡಬೇಕಾಗಿದೆ.

———————–ಬಿ.ಹೆಚ್. ರವಿ ನಾಗಮಂಗಲ

Leave a Reply

Your email address will not be published. Required fields are marked *

× How can I help you?