ನಾಗಮಂಗಲ-ಅಲೋಕ್ ಕುಮಾರ್ ಎಂಬ ಅಪ್ಪಟ ಬಿಹಾರಿ ಕನ್ನಡಿಗ…..!

ಮೂಲತಃ ಬಿಹಾರ ರಾಜ್ಯದವರಾದ ಅಲೋಕ್ ಕುಮಾರ್ ಪ್ರಾರಂಭದಲ್ಲಿ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಅಲ್ಲಿ ನೀವೃತ್ತಿ ಪಡೆದ ನಂತರ ಸ್ಟೇಟ್ ಆಫ್ ಇಂಡಿಯಾ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಖಾ ವ್ಯವಸ್ಥಾಪಕರಾಗಿ ಕೆಲಸಕ್ಕೆ ಸೇರಿ,ಕರುನಾಡಿಗೆ ನಿಯುಕ್ತಿಗೊಂಡು ಬಂದ ಮೇಲೆ ಅತೀ ಕಡಿಮೆ ಅವಧಿಯಲ್ಲಿ ಕನ್ನಡ ಭಾಷೆ ಕಲಿತು ಸುಲಲಿತವಾಗಿ ಕನ್ನಡ ಮಾತನಾಡ ಬಲ್ಲವರಾಗಿದ್ದಾರೆ.

ಕಾಲೇಜು ದಿನಗಳಲ್ಲಿ ವಾಲಿಬಾಲ್ ಕ್ರೀಡಾಪಟುವಾಗಿದ್ದ ಇವರಿಗೆ ಸಾಹಿತ್ಯ,ಕಲೆ,ಸಂಸ್ಕೃತಿ ಬಗೆಗೆ ತುಂಬಾ ಆಸಕ್ತಿ ಹಾಗೂ ದೋಹೆಗಳನ್ನು ಹಾಡುವುದು ಇವರ ಪರಮ ಆಸಕ್ತಿಯಲ್ಲೊಂದು ಎಂದರು ತಪ್ಪಾಗಲಾರದು.

ಇವರ ತಂದೆ ಬಿಹಾರ ರಾಜ್ಯದಲ್ಲಿ ಗಣಿತ ಶಿಕ್ಷಕರು,ತಂದೆಯನ್ನು ನಿವೃತ್ತಿ ನಂತರ ಜೊತೆಯಲ್ಲೆ ಇರಿಸಿಕೊಂಡಿದ್ದಾರೆ.

ಬಿಡುವಿನ ವೇಳೆಯಲ್ಲಿ ಹಿಂದಿ ಶಿಕ್ಷಕರ ಕೊರತೆಯಿರುವ ಸ್ಥಳೀಯ ಸರ್ಕಾರಿ ಕನ್ನಡ ಶಾಲೆಗಳಿಗೆ ಹೋಗಿ ಉಚಿತವಾಗಿ ಹಿಂದಿ ಪಾಠ ಬೋಧನೆಯನ್ನು ಅಲೋಕ್ ಕುಮಾರ್ ಮಾಡುವುದು ವಿಶೇಷವಾಗಿದೆ.

ಅಲೋಕ್ ಕುಮಾರ್ ಅವರು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು, ಶಿಕ್ಷಕರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವುದರಲ್ಲಿ ಮುಂಚೂಣಿ ಯಲ್ಲಿದ್ದಾರೆ.

ಇವರ ಕನ್ನಡ ಪ್ರೇಮ ಎಷ್ಟಿದೆಯೆಂದರೆ ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ.ಹರಿಕಥೆ,ನಾಟಕಗಳನ್ನು ನೋಡಲು ಮುಂದಿನ ಪಂಕ್ತಿಯಲ್ಲಿ ಕುಳಿತಿರುತ್ತಾರೆ.

ಬ್ಯಾಂಕ್ ನಲ್ಲಿ ಸದಾ ಉತ್ಸಾಹ ಲವಲವಿಕೆ ಹಾಗೂ ಹಾಸ್ಯ ಪ್ರಜ್ಞೆಯಿಂದ ಶಾಖಾ ವ್ಯವಸ್ಥಾಪಕ ಎಂಬ ಪರಿವೆಯೇ ಇಲ್ಲದೆ ಒಬ್ಬ ಗುಮಾಸ್ತನಂತೆ ಎಲ್ಲಾ ಕೆಲಸ ಮಾಡಿಮುಗಿಸುವ ಉಮೇದು. ಪರಿಸರದ ಭಾಷೆ ಕನ್ನಡದಲ್ಲಿ ವ್ಯವಹರಿಸುತ್ತಾ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸೇವೆ ಸಲ್ಲಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೆಲವು ಕೂಪಮಂಡೂಕ ‘ಕಂಗ್ಲೀಷ್’ ಗ್ರಾಹಕರು ಇವರು ಬಿಹಾರಿ ಎಂದು ತಿಳಿದು ಅರೆಬರೆ ಇಂಗ್ಲಿಷ್ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಈಡಾಗುತ್ತಾರೆ.ಈ ಸಂದರ್ಭದಲ್ಲಿ ಒಳಗೊಳಗೇ ನಗಾಡುತ್ತಲೇ ಇವರು ಅಚ್ಚುಕಟ್ಟಾಗಿ ಕನ್ನಡದಲ್ಲೇ ಮಾತನಾಡುತ್ತಾ ಎಲ್ಲರನ್ನು ಬೆರಗುಗೊ ಳಿಸುತ್ತಾರೆ.

ಬ್ಯಾಂಕ್ ನಲ್ಲಿ ಸರ್ವರ್ ಕೈಕೊಟ್ಟಾಗ ಏಕಾತಾನತೆಯಿಂದ ಹೊರ ಬರಲು ಹಿಂದಿ ದೋಹೆಗಳನ್ನು ಕನ್ನಡಕ್ಕೆ ಅನುವಾದಿಸಿ ಆಧ್ಯಾತ್ಮಿಕ ರೂಪನೀಡುತ್ತಾರೆ.ಸಿಸ್ಟಂ ಕೈ ಕೊಟ್ಟಾಗ ಕುಳಿತಲ್ಲಿಯೇ ತನ್ನ ಆಂಗಿಕ ಅಭಿನಯದೊಂದಿಗೆ ಲಘು ನೃತ್ಯ ಮಾಡಿ ಗ್ರಾಹಕರನ್ನು ನಗೆಯ ಕಡಲಲ್ಲಿ ತೇಲಿಸಿ ಹಗುರಾಗುವಂತೆ ಮಾಡಿಬಿಡುತ್ತಾರೆ.

ಮನೆಯಲ್ಲಿ ಹಾರ್ಮೋನಿಯಂ ಹಿಡಿದು ದೋಹೆಗಳನ್ನು ಕನ್ನಡದಲ್ಲಿ ನುಡಿಸುತ್ತಿರುತ್ತಾರೆ.ಕನ್ನಡ ಸಾಹಿತ್ಯ ಕನ್ನಡ ಸಿನಿಮಾದ ಬಗೆಗೆ ತಿಳಿದುಕೊಳ್ಳುವ ಕುತೂಹಲ ಇವರದು.

———ದಿನೇಶ್ ಹೆರಗನಹಳ್ಳಿ

Leave a Reply

Your email address will not be published. Required fields are marked *

× How can I help you?