ನಾಗಮಂಗಲ-ನಿತ್ಯ ವ್ಯವಹಾರಕ್ಕೆ ಬೇರೆ ಭಾಷೆ ಬಳಸಿದರು ಮಾತೃಭಾಷೆ ಕನ್ನಡವೇ ಹೃದಯದ ಭಾಷೆಯಾಗಬೇಕು-ಡಾ ಎ. ಟಿ ಶಿವರಾಮು

ನಾಗಮಂಗಲ– ನಿತ್ಯ ವ್ಯವಹಾರಕ್ಕಾಗಿ ಯಾವ ಭಾಷೆಯನ್ನಾದರೂ ಕಲಿಯಿರಿ ಆದರೆ ಮಾತೃಭಾಷೆಯಾದ ಕನ್ನಡವೇ ಹೃದಯದ ಭಾಷೆಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನಗಳು ವಿಭಾಗದ ಡೀನ್ ಡಾ. ಎ ಟಿ ಶಿವರಾಮು ಅಭಿಪ್ರಾಯ ಪಟ್ಟರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಾಗಮಂಗಲ ತಾಲ್ಲೂಕು ಬಿಜಿ ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ, ಮಾಡೆಲ್ ಪಬ್ಲಿಕ್ ಸ್ಕೂಲ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ‘ನವೆಂಬರ್ ನಿತ್ಯೋತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ದಿನವಾದ ಇಂದು ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮ ಸಾಕಾರಗೊಂಡಿರುವುದೇ ವಿಶೇಷವಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಈ ಮಣ್ಣಿನ ಜಾನಪದ ಹಾಗೂ ಅನೇಕ ಮಹನೀಯರ ಕೊಡುಗೆಗಳನ್ನು ಸ್ಮರಿಸುತ್ತಾ, ಪ್ರತಿಯೊಬ್ಬರೂ ತನ್ನೂರಿನ ಹಿರಿಮೆ-ಗರಿಮೆಯನ್ನು ಅರಿತು ಸಂಗ್ರಹಿಸಿ ಆ ಮೂಲಕ ನಾಡಿನ ಶ್ರೇಷ್ಠತೆಗೆ ಕೈಜೋಡಿಸಬೇಕು ಎಂದರು.

‘ಕನ್ನಡ ಸಾಹಿತ್ಯ ಲೋಕಕ್ಕೆ ನಾಗಮಂಗಲ ಸಾಹಿತಿಗಳ ಕೊಡುಗೆ’ ವಿಷಯ ಕುರಿತು ತಾಲ್ಲೂಕಿನ ಕೆಂಬಾರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಎಂ ತಿಮ್ಮರಾಯಿಗೌಡ ತಮ್ಮ ಉಪನ್ಯಾಸದಲ್ಲಿ ಕನ್ನಡದ ಕಣ್ವ ಎಂದೇ ಹೆಸರಾದ ಬಿ ಎಂ ಶ್ರೀಕಂಠಯ್ಯನವರು ಹೆಚ್ಚು ಕನ್ನಡ ಬಳಸುವ ಮಂಡ್ಯ ಜಿಲ್ಲೆಯ ಬೆಳ್ಳೂರಿನವರು. ನವೋದಯ ಸಾಹಿತ್ಯಕ್ಕೆ ಮುನ್ನುಡಿ ಬರೆದವರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಕನ್ನಡ ಎಂಎ ತರಗತಿ ಆರಂಭ ಮತ್ತು ಪ್ರಥಮ ಬಾರಿಗೆ ತಮ್ಮ ಸ್ವಂತ ಹಣದಿಂದ ಅಚ್ಚುಕೂಟ ಪ್ರಾರಂಭಿಸಿದವರು ಬಿಎಂಶ್ರೀ. ನಾಗಮಂಗಲದ ಹಂದೇನಹಳ್ಳಿಯ ಕೆಂಪಣ್ಣಗೌಡರೇ ಮೂಡಲಪಾಯ ಯಕ್ಷಗಾನದ ಮೊದಲಿಗರು, ಹ ಕ ರಾಜೇಗೌಡ, ಬಿಂಡಿಗನವಿಲೆ ವೆಂಕಟಚಾರ್ಯ, ಬಿ ಸಿ ರಾಮಚಂದ್ರ ಶರ್ಮ, ನಾಗತಿಹಳ್ಳಿ ಚಂದ್ರಶೇಖರ, ಕ ರಾ ಕೃಷ್ಣಸ್ವಾಮಿ, ಹೆಚ್ ಎಲ್ ನಾಗೇಗೌಡ, ಜಿ ಶಂ ಪರಮಶಿವಯ್ಯ, ಡಾ. ರಾಜಾರಾಮಣ್ಣ, ಗರುಡಾಚಾರ್, ಎಂ ಶಂಕರಲಿಂಗೇಗೌಡರಂಥ ಎಲ್ಲ ದಾರ್ಶನಿಕರು ಹಾಗೂ ಅಮ್ಮ ಹೇಳಿದ ಎಂಟು ಸುಳ್ಳುಗಳು ಕರ್ತೃ ಎಂ ಆರ್ ಮಣಿಕಾಂತ್ ಸೇರಿದಂತೆ ತಾಲ್ಲೂಕಿನ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದವರು ಎಂದು ಉಲ್ಲೇಖಿಸಿ ಇವರೆಲ್ಲರ ಸಾಹಿತ್ಯ ಸಾಧನೆಯನ್ನು ಸಾದರಪಡಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಿ ಆರ್ ಚಂದ್ರಶೇಖರ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಗಮಂಗಲ ತಾಲೂಕಿನಾಧ್ಯಂತ ನವೆಂಬರ್ ನಿತ್ಯೋತ್ಸವ ಕಾರ್ಯಕ್ರಮವು ನವೆಂಬರ್ 1ರಂದು ತಾಲೂಕಿನ ಹೊನ್ನಾವರದಲ್ಲಿ ಉದ್ಘಾಟನೆಗೊಂಡು ನವೆಂಬರ್ 30ರಂದು ಶ್ರೀ ಆದಿಚುಂಚನಗಿರಿಯಲ್ಲಿ ಸಮಾರೋಪ ಗೊಳ್ಳುತ್ತಿದೆ. ಸೈಕಲ್ ಜಾಥಾ, ರಸಪ್ರಶ್ನೆ, ಉಪನ್ಯಾಸಗಳು ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳು ನಿತ್ಯ ಸಾಕಾರಗೊಳ್ಳುತ್ತಿವೆ. ಲೋಕಪಾವನಿ, ವೀರ ವೈಷ್ಣವಿ, ಕೇತಕ, ದಾಯ ಮತ್ತು ಜಾಗೀರ್ ಎಂಬ ಐದು ನದಿಗಳ ಉಗಮ ಸ್ಥಾನದ ತಿಳಿವು ಮತ್ತು ನಾಗಮಂಗಲದ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ನಿತ್ಯೋತ್ಸವ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಡೆಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಬಿ ಇಡಿ ಕಾಲೇಜು ಪ್ರಾಧ್ಯಾಪಕರಾದ ಎ ಸಿ ದೇವಾನಂದ್, ಎ ಎಚ್ ಗೋಪಾಲ್, ಲೋಕೇಶ್ ವಿ, ಸೌಮ್ಯ ಎನ್ ಎಸ್, ರಾಜಶೇಖರ್ ಮೂರ್ತಿ ಹಾಗೂ ಇತರರಿದ್ದರು.

_——ರವಿ ಬಿ ಹೆಚ್

Leave a Reply

Your email address will not be published. Required fields are marked *

× How can I help you?