ನಾಗಮಂಗಲ-ಎನ್. ಪಿ.ಎಸ್.-ಯೋಜನೆ ವಿರೋಧಿಸಿ-ಫೆಬ್ರವರಿ-7 ರಂದು-ಪ್ರತಿಭಟನೆ: ವೈ.ಎನ್. ನಿಂಗರಾಜು.

ನಾಗಮಂಗಲ: ಎನ್. ಪಿ.ಎಸ್. ಯೋಜನೆಯನ್ನು ವಿರೋಧಿಸಿ ಫೆಬ್ರವರಿ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಓ.ಪಿ.ಎಸ್. ಹಕ್ಕೊತ್ತಾಯಕ್ಕಾಗಿ ಧರಣಿಯನ್ನು ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ.ಎಸ್. ನೌಕರರ ಸಂಘದ ನಾಗಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎನ್. ನಿಂಗರಾಜು ತಿಳಿಸಿದರು.

ನಾಗಮಂಗಲ ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ಎನ್. ಪಿ.ಎಸ್. ನೌಕರರ ಸಂಘವು 2006 ನೇ ವರ್ಷ ಜೂನ್ ತಿಂಗಳ ಒಂದರಿಂದ ಸರ್ಕಾರಿ ಸೇವೆಗೆ ಸೇರಿರುವ ಸುಮಾರು 2 ಲಕ್ಷ 75 ಸಾವಿರ ನೌಕರರನ್ನು ಪ್ರತಿನಿಧಿಸುತ್ತಿದ್ದು, ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ನೌಕರರ ಇಳಿಯ ವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು 2006 ನೇ ವರ್ಷದ ಏಪ್ರಿಲ್ ತಿಂಗಳ ಒಂದರಂದು ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿರುವುದನ್ನು ಸಂಘವು ವಿರೋಧಿಸುತ್ತದೆ.

ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟವನ್ನು ನಡೆಸುತ್ತಿದ್ದು, ಪ್ರಸ್ತುತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯ ಮಟ್ಟದಲ್ಲಿ ಫೆಬ್ರವರಿ ತಿಂಗಳ 7ರ ಶುಕ್ರವಾರ ರಂದು ಓ.ಪಿ.ಎಸ್ ಹಕ್ಕೊತ್ತಾಯಕ್ಕಾಗಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಈಗಾಗಲೇ ಸ್ಥಳವನ್ನು ನಿಗಧಿಪಡಿಸಲಾಗಿದೆ

ಆದ್ದರಿಂದ ನಾಗಮಂಗಲ ತಾಲ್ಲೂಕಿನ ಎಲ್ಲಾ ಎನ್. ಪಿ.ಎಸ್ ನೌಕರ ಬಾಂಧವರು ಈ ಧರಣಿಯಲ್ಲಿ ಭಾಗವಹಿಸಬೇಕಾಗಿದೆ ಎಂದು ಸಂಘದ ಅಧ್ಯಕ್ಷ ವೈ.ಎಸ್. ನಿಂಗರಾಜು ಅವರು ಎನ್. ಪಿ.ಎಸ್. ನೌಕರರಲ್ಲಿ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಎನ್. ಪಿ.ಎಸ್. ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಮನುಕುಮಾರ್, ತಾಲ್ಲೂಕು ಘಟಕದ ಉಪಾಧ್ಯಕ್ಷೆ ಪ್ರೇಮ, ಆರ್. ಶಾರದಾಂಬ, ಕಾರ್ಯದರ್ಶಿ ಎಂ.ಆನಂದ್, ಖಜಾಂಚಿ ಹೆಚ್. ಸಂತೋಷ, ಜಂಟಿ ಕಾರ್ಯದರ್ಶಿ ಡಿ.ಪಿ.ಅನಿಲ್ ಕುಮಾರ್, ಸೇರಿದಂತೆ ನಾಗಮಂಗಲ ತಾಲ್ಲೂಕಿನ ಎಲ್ಲಾ ಎನ್. ಪಿ.ಎಸ್. ನೌಕರರು ಉಪಸ್ಥಿತರಿದ್ದರು.


– ಬಿ.ಹೆಚ್. ರವಿ, ನಾಗಮಂಗಲ

Leave a Reply

Your email address will not be published. Required fields are marked *

× How can I help you?