ನಾಗಮಂಗಲ:ಇದೇ ತಿಂಗಳ 25 ರಿಂದ ಡಿಸೆಂಬರ್ 1ರ ತನಕ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಶಾರದೆ ಲೀಲಾವತಿ ವೇದಿಕೆಯಲ್ಲಿ ನಾಗರಂಗ ನಾಟಕೋತ್ಸವ ನಡೆಯಲಿದೆ ಎಂದು ನಾಗಮಂಗಲ ಕನ್ನಡ ಸಂಘದ ಅಧ್ಯಕ್ಷ ಕೆ.ಅಲಮೇಲ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು,25 ರ ಸೋಮವಾರ ಸಂಜೆ 6-30 ಗಂಟೆಗೆ ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಹಚ್ಚೇವು ಕನ್ನಡದ ದೀಪ ಎಂಬ ಗೀತ ನೃತ್ಯದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರಿಗೆ ನುಡಿ ಗೌರವ ಮತ್ತು ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಅವರಿಗೆ ರಂಗ ಗೌರವವನ್ನು ಕನ್ನಡ ಸಂಘದ ವತಿಯಿಂದ ಅರ್ಪಿಸಲಾಗುವುದು ಎಂದರು.
ನಾಗರಂಗ ನಾಟಕೋತ್ಸವದ ಪ್ರಾರಂಭ ದಿನದಂದು ಮೈಸೂರಿನ ಮೈಮ್ ಟೀಮ್ ವಿನಾಯಕ್ ಭಟ್ ಹಾಸಣಗಿ ನಿರ್ದೇಶಿಸಿರುವ ‘ನನಗ್ಯಾಕೋ ಡೌಟು’ ಪ್ರದರ್ಶನ ನಡೆಯಲಿದೆ.
ನವೆಂಬರ್ 26 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ರೂಪಾಂತರ,ಎಸ್. ಡಿ.ಎಲ್. ಚಂದ್ರು ನಿರ್ದೇಶನದ ಪರಸಂಗದ ಗೆಂಡೆತಿಮ್ಮ ,ನವೆಂಬರ್ 27 ರಂದು ಸಂಜೆ 7 ಗಂಟೆಗೆ ಬೆಂಗಳೂರು ಥಿಯೇಟರ್ ಕಲೆಕ್ಟಿವ್, ವೆಂಕಟೇಶ್ ಪ್ರಸಾದ್ ನಿರ್ದೇಶನದ ಕಾಕದೋಷ,ನವೆಂಬರ್ 28 ಗುರುವಾರ ಸಂಜೆ 7 ಗಂಟೆಗೆ ಧಾರವಾಡ ಸಮುದಾಯ, ವಾಸುದೇವ ಗಂಗೇರ ನಿರ್ದೇಶನದ ದೇವರ ಹೆಣ.
ನವೆಂಬರ್ 29 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಕಲಾಮೈತ್ರಿ , ಡಾ.ಕೆ.ರಾಮಕೃಷ್ಣಯ್ಯ ನಿರ್ದೇಶನದ ದಾರಾಶಿಕೋ,ನವೆಂಬರ್ 30 ರಂದು ಸಂಜೆ 7 ಗಂಟೆಗೆ ಮೂಡಬಿದರೆ, ಡಾ. ಜೀವನ್ ರಾಂ.ಸುಳ್ಯ ನಿರ್ದೇಶನದ ಚಾರುವಸಂತ,ಡಿಸೆಂಬರ್ 1 ರಂದು ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ರಂಗಾಸ್ಥೆ,ಗಣೇಶ್ ಮಂದಾರ್ತಿ ನಿರ್ದೇಶನದ ದ್ರೋಪತಿ ಹೇಳ್ತವ್ಳೆ ಎಂಬ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ನಾಟಕೋತ್ಸವದ ಕೊನೆಯ ದಿನದಂದು ಬೆಂಗಳೂರಿನ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟ ಡಾ.ಎಂ.ಕೆ.ಸುಂದರ್ ರಾಜ್,ರಂಗಕರ್ಮಿ ಹಾಗೂ ಚಲನಚಿತ್ರ ನಟ ಸುಂದರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಾಗರಂಗ ನಾಟಕೋತ್ಸವಕ್ಕೆ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್.ಭೈರಪ್ಪ ನವರು ಶುಭವನ್ನು ಹಾರೈಸಿದ್ದಾರೆ.7 ದಿನಗಳ ಕಾಲ ನಡೆಯುವ ನಾಗರಂಗ ನಾಟಕೋತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಕೆ.ಅಲಮೇಲ ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಬಾಲು,ಕನ್ನಡ ಸಂಘದ ಸದಸ್ಯ ಯು.ವಿ. ಉಲ್ಲಾಸ್ ಉಪಸ್ಥಿತರಿದ್ದರು.
————————ಬಿ.ಹೆಚ್. ರವಿ