ನಾಗಮಂಗಲ-ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕದಬಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವತಿಯಿಂದ 2025ನೇ ವರ್ಷದ ಪ್ರಥಮ ದಿನದಂದು ಶಾಲಾ ಮಕ್ಕಳಿಗೆ ಕನ್ನಡ ರಾಜ್ಯೋತ್ಸವ,ಮಕ್ಕಳ ದಿನಾಚರಣೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸವಾಲು ಎಂಬ ಅರಿವು ಮೂಡಿಸುವ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪುಟ್ಟರಾಜು ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ತರುವಾಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು,ಒಂದೇ ವೇದಿಕೆಯಲ್ಲಿ,ಅದರಲ್ಲೂ 2025ನೇ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ,ಮಕ್ಕಳ ದಿನಾಚರಣೆ ಹಾಗೂ ಇನ್ನೂ ಮುಖ್ಯವಾಗಿ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಬರೆಯುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಯಾವುದೇ ಭಯಪಡಬಾರದು.ಪರೀಕ್ಷೆಯನ್ನು ಬರೆದರಷ್ಟೇ ನಮ್ಮ ಭವಿಷ್ಯ ಉಜ್ವಲವಾಗುವುದು ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೆ.ಎಂ.ದೊಡ್ಡಿ ಭಾರತಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುಬ್ಬೇಗೌಡ ಮಾತನಾಡಿ,ಮೊಬೈಲ್ ಫೋನ್ ಬಂದ ಮೇಲೆ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಇದರ ಜೊತೆಗೆ ಮಕ್ಕಳು ಅತಿ ಹೆಚ್ಚಾಗಿ ಮೊಬೈಲ್ ಫೋನ್ ನೋಡುವುದರಿಂದ ಜ್ಞಾಪಕ ಶಕ್ತಿ ಕಡಿಮೆ ಆಗುತ್ತಿದೆ.ಆದಷ್ಟು ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರುವಂತೆ ಎಚ್ಚರವಹಿಸಬೇಕಾದ್ದು ಪೋಷಕರ ಬಹುಮುಖ್ಯ ಕರ್ತವ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿ ಕೊಂಡರೆ ನಮ್ಮ ಕನ್ನಡ ಭಾಷೆಯನ್ನು ಉಳಿಸಬಹುದು.ಇದರ ಜೊತೆಗೆ ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸುಬ್ಬೇಗೌಡರು ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಬಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಎನ್. ಲಿಂಗರಾಜು ಮಾತನಾಡಿದರು.
2025ನೇ ವರ್ಷಾಚರಣೆ ಪ್ರಥಮ ದಿನದಂದು ಶಾಲಾ ಮಕ್ಕಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ವಿತರಿಸಲಾಯಿತು.
ಈ ಸಮಾರಂಭದಲ್ಲಿ ಕದಬಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಕನ್ನಡ ಮಂಜೇಗೌಡ ಸೇರಿದಂತೆ ಕದಬಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ಪ್ರೌಢ ಶಾಲೆಯ ವಿಭಾಗದ ಎಲ್ಲಾ ಶಿಕ್ಷಕರುಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು.
—————-–ಬಿ.ಹೆಚ್. ರವಿ