ನಾಗಮಂಗಲ:ದೇಶಕ್ಕೆ ಅನ್ನಕೊಡುವ ರೈತರನ್ನು ಕಡೆಗಣಿಸದೆ ರೈತರ ಹೆಸರಿನಲ್ಲಿ ನಡೆಯುವ ರೈತ ದಿನಾಚರಣೆಯನ್ನು ವಿವಿಧ ಜಯಂತಿಗಳ ರೀತಿಯಲ್ಲಿಯೇ ಪ್ರಾಮುಖ್ಯತೆಯಿಂದ ಆಚರಿಸು ವಂತಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾ ಮಪುರ ರಂಗೇಗೌಡ ಆಗ್ರಹಿಸಿದರು.
ನಾಗಮಂಗಲ ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ರೈತ ಕೃಷಿ ಸಂವರ್ಧನ ಕೇಂದ್ರ ನಾಗಮಂಗಲ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜಯಂತಿ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾ ಡಿದರು.
ನಮ್ಮ ದೇಶದಲ್ಲಿ ಯಾವುದೇ ಸರ್ಕಾರ ಬಂದರು ಕೂಡ ರೈತರನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತವೆಯೇ ಹೊರತು,ಕನಿಷ್ಠ ರೈತ ದಿನಾಚರಣೆಯನ್ನು ಸಹ ಶ್ರದ್ದೆಯಿಂದ ಆಚರಿಸುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಅವರು ಬೇಸರ ಹೊರಹಾಕಿದರು.
ಭವಿಷ್ಯದಲ್ಲಾದರೂ ನಮ್ಮನ್ನು ಆಳುವ ಜನಪ್ರತಿನಿಧಿಗಳು,ಅಧಿಕಾರಿಗಳು ಡಿ,23 ರಂದು ಆಚರಿಸುವ ರೈತ ದಿನಾಚರಣೆಯನ್ನು ಗಾಂಧಿ ಜಯಂತಿ ಇತ್ಯಾದಿಗಳ ಮಾದರಿಯಲ್ಲಿಯೇ ತಾಲೂಕಿನ ರೈತರೆಲ್ಲರನ್ನು ಒಟ್ಟು ಗೂಡಿಸಿ ಹಬ್ಬದ ರೀತಿಯಲ್ಲಿ ನಡೆಸುವಂತೆ ರಂಗೇಗೌಡರು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ 2024ನೇ ಸಾಲಿನಲ್ಲಿ ಸಮಗ್ರ ಕೃಷಿ,ಸಾವಯವ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡಿರುವ ನಾಗಮಂಗಲ ತಾಲ್ಲೂಕಿನ ಹೊನಕೆರೆ ಹೋಬಳಿಯ ಬಿ.ಶೆಟ್ಟಿಹಳ್ಳಿ ಗ್ರಾಮದ ರೈತ ಎಸ್. ಬಿ.ರಾಮು ಅವರಿಗೆ ಕರ್ನಾಟಕ ರೈತ ಕೃಷಿ ಸಂವರ್ಧನ ಕೇಂದ್ರದ ವತಿಯಿಂದ ಕೃಷಿ ಕಾಯಕ ಪ್ರಶಸ್ತಿ ನೀಡಿ ಸಂಘದ ಅಧ್ಯಕ್ಷ ಕೊಣನೂರು ಮಹಾಬಲೇಶ್ವರ ಅವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ರೈತ ಬಿ.ಶೆಟ್ಟಿಹಳ್ಳಿ ಎಸ್. ಬಿ.ರಾಮು ಮಾತನಾಡಿ,ನಮ್ಮ ಭೂಮಿಯನ್ನು ರಾಸಾಯನಿಕ ಮುಕ್ತವಾಗಿ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ವ್ಯವಸಾಯ ಮಾಡಲು ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.
ಆದ್ದರಿಂದ ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕುವುದರ ಬದಲು ಸಾವಯವ ಗೊಬ್ಬರ ಬಳಸಿ ವ್ಯವಸಾಯ ಮಾಡಿದರೆ ಮನುಷ್ಯನ ಆರೋಗ್ಯ ಚೆನ್ನಾಗಿ ಇರುತ್ತದೆ. ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.ನಮ್ಮ ಸೈನಿಕರು ದೇಶವನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಅದೇ ರೀತಿ ನಮ್ಮ ರೈತರು ದೇಶದ ಜನರಿಗೆ ಅನ್ನವನ್ನು ನೀಡುತ್ತಿದ್ದಾರೆ. ಆದ್ದರಿಂದ ರಾಷ್ಟ್ರೀಯ ರೈತರ ದಿನಾಚರಣೆ ಆಚರಣೆ ಮಾಡುವ ಮೂಲಕ ರೈತರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ. ಸಹಾಯಕ ಕೃಷಿ ನಿರ್ದೇಶಕ ಆರ್. ಹರೀಶ್,ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್. ಮಂಜುನಾಥ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸೀತಾರಾಮ್,ಕರ್ನಾಟಕ ರಾಜ್ಯ ರೈತರ ಸಂಘದ ಮುಖಂಡ ದಡಗ ಸತೀಶ್, ಕರ್ನಾಟಕ ರೈತ ಕೃಷಿ ಸಂವರ್ಧನ ಕೇಂದ್ರ ಅಧ್ಯಕ್ಷ ಕೊಣನೂರು ಮಹಾಬಲೇಶ್ವರ ಸೇರಿದಂತೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು,ರೈತರ ಮುಖಂಡರುಗಳು ಉಪಸ್ಥಿತರಿದ್ದರು
————-—ಬಿ.ಹೆಚ್. ರವಿ ನಾಗಮಂಗಲ