ನಾಗಮಂಗಲ-ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೂ ಸಹ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು.ಆಗಮಾತ್ರ ವಿದ್ಯಾರ್ಥಿಗಳ ಬದುಕಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್ನಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಯೋಜನೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಅಂಕಗಳಿಸಿ ತೆರ್ಗಡೆಯಾಗುವುದಕ್ಕೆ ವಿದ್ಯಾರ್ಥಿಗಳು ಸೀಮಿತವಾಗಬಾರದು. ವಿದ್ಯೆ ಕಲಿತವರಿಗೆಲ್ಲಾ ಕೆಲಸ ಸಿಗುವುದಿಲ್ಲ. ಉದ್ಯೋಗದಿಂದಲೇ ಜೀವನ ಕಟ್ಟಿಕೊಳ್ಳುತ್ತೇವೆ ಎನ್ನುವುದನ್ನು ಬಿಡಬೇಕು. ವೈಯುಕ್ತಿಕವಾಗಿ ಜೀವನ ಕಟ್ಟಿಕೊಳ್ಳಲು ಅನೇಕ ದಾರಿಗಳಿವೆ. ವಿದ್ಯೆಯ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ವಿವೇಕ ಬೆಳೆಸಿಕೊಂಡು, ಬುದ್ದಿವಂತಾರಾಗಿ ದೇಶದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಏನೆಲ್ಲಾ ಅಗುತ್ತಿದೆ. ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರಿತು ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಪೋಷಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದಿರುವ ಗ್ರಾಮೀಣ ಪ್ರದೇಶದ ಅನೇಕ ಮಂದಿ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ತಿಳುವಳಿಕೆ ಕೊಡುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ. ಹಾಗಾಗಿ ನಿಮ್ಮ ಬುದ್ದಿವಂತಿಕೆ ನಮ್ಮ ದೇಶಕ್ಕೆ ಹಾಗೂ ನಿಮ್ಮ ಪೋಷಕರಿಗೆ ಉಪಯೋಗವಾಗುವಂತಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಳೆದ 2006 ರಲ್ಲಿ ನಾನು ಸಚಿವನಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜು ತೆರೆಯಲಾಯಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆಯನ್ನು ಸ್ಮರಿಸಿಕೊಂಡು ಕುಟುಂಬದಲ್ಲಿ ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಬೆಂಗಳೂರಿನ ಆರ್‌ಎನ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಚಿತ್ರಲಿಂಗಯ್ಯ ಅವರು ಪ್ರಧಾನ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ವೈ.ಸಿ.ನೇತ್ರಾವತಿ ಅಧ್ಯಕ್ಷತೆವಹಿಸಿ ಮಾತನಾಡಿದರು.ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರಂಭಕ್ಕೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕಾಲೇಜಿನ ವಿದ್ಯಾರ್ಥಿನಿಯರು ಪೂರ್ಣಕುಂಭ ಸ್ವಾಗತಕೋರಿ ಬರಮಾಡಿಕೊಂಡರು.
ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಡಿವೈಎಸ್‌ಪಿ ಚಲುವರಾಜು, ಸಿಪಿಐ ನಿರಂಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ನಾಮನಿರ್ದೇಶಿತ ಸದಸ್ಯ ಸಂಪತ್‌ಕುಮಾರ್, ಪ್ರಸಾದ್, ಕಾಲೇಜಿನ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.