ಮೂಡಿಗೆರೆ:ಪಟ್ಟಣದ ಹೃದಯ ಭಾಗದಲ್ಲಿ ಹೊಸತಾಗಿ ನಂದಿನ ಹಾಲು ಘಟಕ ಪ್ರಾರಂಭಗೊoಡಿರುವುದು ಪಟ್ಟಣದ ಜನತೆಗೆ ಅನುಕೂಲವಾಗುವ ಜೊತೆಗೆ ಹೈನುಗಾರಿಕೆಗೂ ಉತ್ತೇಜನ ನೀಡಿದಂತಾಗುತ್ತದೆ ಎಂದು ಪ.ಪಂ. ಅಧ್ಯಕ್ಷೆ
ಗೀತಾ ರಂಜನ್ ಅಜಿತ್ ಕುಮಾರ್ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆ ಎದುರು ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘದಿoದ ನೂತನವಾಗಿ ಪ್ರಾರಂಭಿಸಲಾದ ನಂದಿನಿ ಹಾಲಿನ ಡೈರಿ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ.ಇಲ್ಲಿ ಮತ್ತೊಂದು ಹಾಲಿನ ಡೈರಿ ಸ್ಥಾಪಿಸಬೇಕೆಂದು ಮಲೆನಾಡು ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘ ಮುಂದಾಗಿದ್ದು ಸಂತಸದ ವಿಚಾರ.ಈಗ ಹಾಲಿನ ಡೈರಿ ಸ್ಥಾಪನೆಯಿಂದಾಗಿ ಪಟ್ಟಣದ ಜನತೆಗೆ ಇನ್ನಷ್ಟು ಅನುಕೂಲವಾಗಿದೆ.ಹಿಂದೆ ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಹುತೇಕ ರೈತರು ಜಾನುವಾರುಗಳನ್ನು ಸಾಕುವ ರೂಡಿಯಲ್ಲಿತ್ತು.ಆದರೆ ಹಾಲು ಮಾರಾಟಕ್ಕೆ ಸೂಕ್ತ ವ್ಯವಸ್ತೆಯಿಲ್ಲದ ಕಾರಣ ಹೈನುಗಾರಿಯಿಂದ ಹಿಂದೆ ಸರಿದಿದ್ದಾರೆ.ಮುಂದಿನ ದಿನದಲ್ಲಿ ಡೈರಿಯಿಂದ ಹಾಲು ಖರೀದಿ ಕೇಂದ್ರದ ಸ್ಥಾಪನೆಯ ಯೋಜನೆಯೂ ಇದ್ದು ಅದು ನೆರವೇರಿದಲ್ಲಿ ಹೈನುಗಾರಿಕೆಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಪಟ್ಟಣದ ಸ್ವಚ್ಛತೆ ಸಮಸ್ಯೆ ಅಧಿಕಗೊಂಡಿದೆ.ಅದನ್ನು ನಿವಾರಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು,ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡಬೇಕೆಂದು ಮನವಿ ಮಾಡಿದರು.
ಮಲೆನಾಡು ಪ.ಜಾತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ.ಮಲೆನಾಡು ಪ್ರದೇಶದಲ್ಲಿ ಹಿಂದೆ ಹೆಚ್ಚಿನ ಹೈನುಗಾರಿಕೆ ನಡೆಯುತ್ತಿತ್ತು. ಪ್ರತಿ ರೈತರ ಮನೆಯಲ್ಲಿ 30-40 ಜಾನುವಾರುಗಳಿರುತ್ತಿದ್ದವು. ಈಗ ಹೈನುಗಾರಿಕೆ ಕಡಿಮೆಯಾಗಿದೆ.
ಹೈನುಗಾರಿಕೆ ನಡೆಸಿದರೆ ಹಾಲು ಮಾರಾಟಕ್ಕೆ ಕಷ್ಟವಾಗುತ್ತಿದ್ದರಿಂದ ಹೈನುಗಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಹಾಲು ಖರೀದಿ ಕೇಂದ್ರ ಸ್ಥಾಪಿಸಿಲ್ಲವೆಂದು ರೈತರ ಕೊರಗಾಗಿತ್ತು. ರೈತರಿಂದ ಹಾಲು ಖರೀದಿ ಮಾಡಲು ಇರುವ
ಅಡೆತಡೆಗಳನ್ನು ನಿವಾರಿಸಿ ಸದ್ಯದಲ್ಲಿ ಇದರೊಂದಿಗೆ ಹಾಲು ಖರೀದಿ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್,ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಕೆ.ವೆಂಕಟೇಶ್,ಜಿ.ಬಿ.ಧರ್ಮಪಾಲ್, ಸಂಘದ ನಿರ್ದೇಶಕರಾದ ಯು.ಬಿ.ಮಂಜಯ್ಯ, ಗಿರೀಶ್ ಹೆಸಗಲ್,ಚಂದ್ರು, ಹೆಚ್.ಎಸ್.ಪುಟ್ಟಸ್ವಾಮಿ, ಹೆಚ್.ಎಸ್.ಲಕ್ಷ್ಮಣ್,ಎಂ.ಸಿ.ಹೂವಪ್ಪ, ಮಂಜುಳಾ,
ಕಾರ್ಯದರ್ಶಿ ಕೃಷ್ಣ, ಕಾಫಿ ಬೆಳೆಗಾರ ಶೇಷೇಗೌಡ, ರೈತ ಮುಖಂಡ ಪಿ.ಕೆ.ನಾಗೇಶ್, ಚಂದ್ರೇಶ್ ಮಗ್ಗಲಮಕ್ಕಿ, ಹಮೀದ್ ಸಬ್ಬೇನಹಳ್ಳಿ ಮತ್ತಿತರರಿದ್ದರು.
————–ವರದಿ: ವಿಜಯಕುಮಾರ್.ಟಿ.