ಕೆ.ಆರ್.ಪೇಟೆ:ನಂದಿನಿ ಹಾಲನ್ನು ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ಮಾರುಕಟ್ಟೆಯಲ್ಲಿ ಗುಣಮಟ್ಟದ ನಂದಿನಿ ಹಾಲು ಹಾಗೂ ಅದರ ಉತ್ಪನ್ನ ಕಡಿಮೆ ಬೆಲೆ ದೊರೆಯುತ್ತವೆ.ಹಾಲು ಉತ್ಪಾದಿಸುವ ರೈತರು ನಂದಿನಿ ಹಾಲಿನ ಉತ್ಪನ್ನ ಬಳಸಬೇಕು.ಜೊತೆಗೆ ಸಾರ್ವಜನಿಕರು ಸಹ ನಂದಿನಿ ಹಾಲು ಹಾಗು ಅದರಿಂದ ತಯಾರಾಗುವ ಬಗೆಬಗೆಯ ಪದಾರ್ಥಗಳನ್ನು ಬಳಸುವ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಶಾಸಕ ಹೆಚ್ ಟಿ ಮಂಜು ಮನವಿ ಮಾಡಿಕೊಂಡರು.
ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಗ್ರಾಮದ ಗೂಡೇಹೊಸಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದ ಆವರಣದಲ್ಲಿ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಲಬೆರಕೆ ರಹಿತ ಉತ್ತಮ ಶುದ್ಧ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಸದಸ್ಯರು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು.ಜಿಲ್ಲೆಯ ರೈತರನ್ನು ಹೈನೋದ್ಯಮ ಉಳಿಸಿಕೊಂಡು ಬರುತ್ತಿದೆ.ಯಾವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಇರುವುದಿಲ್ಲವೋ ಆ ಗ್ರಾಮಗಳಲ್ಲಿ ರೈತರ ಅಭಿವೃದ್ಧಿ ಸಾಧ್ಯವಿಲ್ಲ.ಜಿಲ್ಲೆಯಲ್ಲಿ ನಮ್ಮ ತಾಲೂಕು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜರುಗುವ ರಾಸುಗಳ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.ಇದಕ್ಕಾಗಿ ಮನ್ಮುಲ್ ವಿಶೇಷ ವಿಮೆ ಯೋಜನೆ ರೂಪಿಸಿದೆ. ರೈತರು ಅರ್ಧ ವಿಮೆ ಪಾವತಿ ಮಾಡಿದರೆ ಉಳಿದ ವಿಮೆ ಹಣವನ್ನು ಮನ್ಮುಲ್ ತುಂಬುತ್ತದೆ ಎಂದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ ಗುಣಮಟ್ಟದ ಹಾಲು ಪೂರೈಕೆಯೊಂದಿಗೆ ಪಶುಗಳ ಆರೈಕೆಯಲ್ಲಿಯೂ ಸಂಘದ ಸದಸ್ಯರು ಹೆಚ್ಚಿನ ಆಸಕ್ತಿ ವಹಿಸಿ,ಕಾಲಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ಪಶುಗಳು ಆರೋಗ್ಯವಾಗಿರುವಂತೆ ಜಾಗೃತೆ ವಹಿಸಿಕೊಳ್ಳಬೇಕು.ರೈತರು ಪಶು ಸಂಗೋಪನೆಯನ್ನು ವೈಜ್ಞಾನಿಕವಾಗಿ ಮಾಡಿದ್ದಲ್ಲಿ ಅಧಿಕ ಲಾಭ ಕಾಣಲು ಸಾದ್ಯವಾಗುತ್ತದೆ.ಹಾಲಿನ ಕೊಬ್ಬಿನ ಅಂಶ 3.5 ಕಿಂತ ಹೆಚ್ಚಾಗಿರಬೇಕು,ಹೆಚ್ಚಾದಷ್ಟು ರೈತರು ಉತ್ತಮ ದರ ಪಡೆಯಬಹುದು.ಖನಿಜ ಮಿಶ್ರಣ,ಗೋಧಾರ ಶಕ್ತಿ ಪುಡಿ,ನೆಕ್ಕು ಬಿಲ್ವೆ ಜೋಳದ ನುಚ್ಚು ಪಶು ಆಹಾರ, ಹಸಿರು ಮೇವಿನ ಜೊತೆ ಹೊಣ ಹುಲ್ಲು ಮುಂತಾದ ಸಮತೋಲನ ಆಹಾರ ನೀಡಿದ್ದಲ್ಲಿ ಹಾಲಿನ ಗುಣ ಮಟ್ಟ ಕಾಪಾಡಬಹುದು.ಈ ತರಹದ ಗುಣ ಮಟ್ಟದ ಹಾಲು ಪೂರೈಕೆಯಿಂದ ಮಾತ್ರ ಡೇರಿ ಲಾಭದಾಯಕವಾಗಿರಲು ಸಾದ್ಯ ಎಂದು ತಿಳಿಸಿದರು.
ಈ ಸಭೆಯಲ್ಲಿ ಮನ್ಮುಲ್ ವಿಸ್ತರಣಾಧಿಕಾರಿಗಳಾದ ಬಸವರಾಜು ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿ.ಹಾಲು ಉತ್ಪಾದಕರನ್ನು ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬೊಲೂರೇಗೌಡ, ಉಪಾಧ್ಯಕ್ಷ ವೆಂಕಟೇಗೌಡ, ನಿರ್ದೇಶಕರಾದ ಕಾಳೇಗೌಡ, ಗೋಪಾಲ್, ಶೇಖರ್, ಮಂಜಪ್ಪ, ಭೋಜೇಗೌಡ, ಕುಮಾರ್, ಭೋಜಯ್ಯ, ಮಂಜುಳ, ಜ್ಯೋತಿ, ಜಯಮ್ಮ, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಗೆಗೌಡ, ಮಾರ್ಗವಿಸ್ತರಣಾಧಿಕಾರಿ ಬಸವರಾಜು,ಸಂಘದ ಕಾರ್ಯದರ್ಶಿ ಅಣ್ಣೆಗೌಡ, ಹಾಲು ಪರೀಕ್ಷಕ ಅಕ್ಷಯ್, ಗುಮಸ್ತ ಪುರುಷೋತ್ತಮ್, ಸಚಿನ್, ಸೇರಿದಂತೆ ಗ್ರಾಮಸ್ಥರು ಇದ್ದರು.
——————————--ಮನು ಮಾಕವಳ್ಳಿ ಕೆ ಆರ್ ಪೇಟೆ