ಮೂಡಿಗೆರೆ-‘ನಯನ ಮೋಟಮ್ಮನವರೇ’ನಿಮ್ಮ ಫೋಟೋವನ್ನು ಮನೆ-ಮನೆಗಳಲ್ಲಿ ಇಟ್ಟು ಜನ ಪೂಜೆ ಮಾಡಲಿದ್ದಾರೆ-ಮಾತಿಗೆ ತಪ್ಪಬೇಡಿ-ಒತ್ತಡಗಳಿಗೆ ಜಗ್ಗಬೇಡಿ

ಮೂಡಿಗೆರೆ:ಕಸ್ತೂರಿರಂಗನ್ ವರದಿ ಜಾರಿಗೆ ಸರಕಾರ ಮುಂದಾದರೆ ತನ್ನ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಪರವಾಗಿ ಸ್ವಪಕ್ಷ ಸರಕಾರದ ವಿರುದ್ಧವೇ ಹೋರಾಟಕ್ಕೆ ಇಳಿಯುವ ಎಚ್ಚರಿಕೆಯನ್ನು ಮೂಡಿಗೆರೆಯ ಶಾಸಕಿ ನಯನ ಮೋಟಮ್ಮ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ನೇರವಾಗಿ ನೀಡಿದ್ದಾರೆ.

ನಯನ ಮೋಟಮ್ಮರ ಈ ನಡೆ ಇತಿಹಾಸವನ್ನೇ ಸೃಷ್ಟಿಸಲಿದೆ.ಮಲೆನಾಡು ಭಾಗದ ರೈತರು ಕಸ್ತೂರಿ ರಂಗನ್ ವರದಿಯ ಬಾಂಬು ಯಾವ ಸಮಯದಲ್ಲಿ ತಮ್ಮ ಮೇಲೆ ಬೀಳುತ್ತದೆಯೋ ಎಂಬ ಭಯದಲ್ಲಿರುವಾಗಲೇ ನಯನ ಮೋಟಮ್ಮರ ಈ ಹೇಳಿಕೆ ಅವರಲ್ಲಿ ಸ್ವಲ್ಪ ಮಟ್ಟಿನ ಜೀವ ತುಂಬಿರುವುದು ಸುಳ್ಳಲ್ಲ.

ಈಗಾಗಲೇ ವಿವಿಧ ಯೋಜನೆಗಳ ಮೂಲಕ ಮಲೆನಾಡು ಭಾಗದ ರೈತರ ಬದುಕಿಗೆ ಕೊಳ್ಳಿ ಇಟ್ಟಿರುವ ಸರಕಾರಗಳು ಯೋಜನೆಗಳ ನಿರಾಶ್ರಿತರಿಗೆ ಸರಿಯಾದ ಪರಿಹಾರ,ಮೂಲ ಸೌಕರ್ಯಗಳನ್ನು ನೀಡದೆ ಬೀದಿಗೆ ಬಿಟ್ಟು ಆಟ ನೋಡಿವೆ.

ನಯನ ಮೋಟಮ್ಮ ಯಾವ ಒತ್ತಡಕ್ಕೂ ಜಗ್ಗದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದು,ಜನರೊಂದಿಗೆ ಅವರ ಬದುಕು ಉಳಿಸಲು ಹೋರಾಟಕ್ಕೆ ಇಳಿದದ್ದೇ ಆದರೆ ಇತಿಹಾಸ ನೆನಪಿಟ್ಟುಕೊಳ್ಳಲಿದೆ.ಮನೆಮನೆಗಳಲ್ಲೂ ದೇವರ ಫೋಟೋದ ಬದಲಿಗೆ ರೈತರು ನಿಮ್ಮ ಫೋಟೋ ಇಟ್ಟು ಪೂಜಿಸಲಿದ್ದಾರೆ.

ಈಗ ಸುದ್ದಿಯನ್ನು ನೋಡೋಣ…..

ಕಸ್ತೂರಿರಂಗನ್ ವರದಿಯನ್ನು ಸರ್ಕಾರ ವರದಿಯನ್ನು ತಡೆಹಿಡಿಯಬೇಕು ಮಲೆನಾಡು ಭಾಗದ ಜನರ ಇಚ್ಛೆಗೆ ವಿರುದ್ದವಾಗಿ ವರದಿಯನ್ನು ಜಾರಿಗೊಳಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನಡೆಸಿದ ಪಶ್ಚಿಮ ಘಟ್ಟದ ಶಾಸಕರ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಎಚ್ಚರಿಕೆ ನೀಡಿರುವುದಾಗಿ ಶುಕ್ರವಾರ ತಿಳಿಸಿದರು.

ನನ್ನ ಕ್ಷೇತ್ರದಲ್ಲಿ ಶೇ.90ರಷ್ಟು ಮಲೆನಾಡು ಪ್ರದೇಶವಿದೆ.ವರದಿ ಜಾರಿಯಾದಲ್ಲಿ ರೈತರು ಮತ್ತು ಕೂಲಿಕಾರ್ಮಿಕರಿಗೆ ನೆಲೆ ಇಲ್ಲದಂತಾಗುತ್ತದೆ.ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ.
ಈಗಾಗಲೇ ಮಲೆನಾಡು ಭಾಗದಲ್ಲಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ
ಜಾರಿಯಾಗಿದ್ದು ಜನ ಚೇತರಿಸಿಕೊಳ್ಳಲಾರದಷ್ಟು ಕಷ್ಟ ಅನುಭವಿಸುತ್ತಿದ್ದಾರೆ.

ರೈತರ ಪ್ರಬಲ ವಿರೋಧದ ನಡುವೆ ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಮುಂದಾಗಿದೆ.ಈ ಯೋಜನೆ ಜಾರಿಯಾದರೆ ನಾನು ಸೇರಿದಂತೆ ಪಶ್ಚಿಮ ಘಟ್ಟದ ಕಸ್ತೂರಿ ರಂಗನ್ ವರದಿ ಅನ್ವಯವಾಗುವ ವ್ಯಾಪ್ತಿಯ ಎಲ್ಲ ಶಾಸಕರು ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಕಸ್ತೂರಿ ರಂಗನ್ ವರದಿ ಜಾರಿಯಾದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಮತ್ತು ಕಾಯ್ದೆ ವ್ಯಾಪಿಯನ್ನು ಬಂಪರ್ ಝೋನ್ ಎಂದು ಘೋಷಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ತಿಳಿಸಿದ್ದಾರೆ.ಅದಕ್ಕೆ ನಾನು ಒಪ್ಪಿಗೆ ಸೂಚಿಸಿಲ್ಲ.

ಇದುವರೆಗೆ ಸರ್ಕಾರ ನೀಡಿದ ಪ್ಯಾಕೇಜ್‌ಗಳು ಯಾವುದೂ ಸಮರ್ಪಕವಾಗಿ ರೈತರಿಗೆ ತಲುಪಿಲ್ಲ.ಡೀಮ್ಡ್ ಫಾರೆಸ್ಟ್
ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ.ನಿವೇಶನಕ್ಕಾಗಿ ಫಲಾನುಭವಿಗಳು ಅರ್ಜಿ ಹಿಡಿದು ಗ್ರಾ.ಪಂ.ಕಛೇರಿಗೆ ಅಲೆದಾಡುತ್ತಿದ್ದಾರೆ.ಈ ಎಲ್ಲಾ ಸಮಸ್ಯೆಗಳ ನಡುವೆ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು.ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಎಚ್ಚರಿಕೆ ನೀಡಿ ಬಂದಿರುವುದಾಗಿ ತಿಳಿಸಿದರು.

………………ವರದಿ: ವಿಜಯಕುಮಾರ್.ಟಿ.

Leave a Reply

Your email address will not be published. Required fields are marked *

× How can I help you?