ಬೇಲೂರು, ಮೇ 19 – ಹಾಸನ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ, 1.55 ಲಕ್ಷ ಮೌಲ್ಯದ ಬಿತ್ತನೆ ಬೀಜವನ್ನು ಜಪ್ತಿ ಮಾಡಿರುವಂತ ಘಟನೆ ಇಂದು ಬೇಲೂರು ತಾಲ್ಲೂಕಿನ ಹಗರೇ ಹೋಬಳಿಯ ರಾಮಚಂದ್ರಪುರ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ ಹಗರೇ ಹೋಬಳಿಯ ರಾಮಚಂದ್ರಪುರ ಗ್ರಾಮದಲ್ಲಿ ಸಿದ್ದೇಗೌಡ ಬಿನ್ ದೇವೇಗೌಡ ಅವರ ನಿವಾಸದಲ್ಲಿ ಯಾವುದೇ ಸರ್ಕಾರಿ ಪರವಾನಿಗೆ ಇಲ್ಲದೆ ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಂಗ್ರಹಿಸಿ ಇಡಲಾಗಿದ್ದು, ಇದನ್ನನ್ನು ಬಳಸುವ ತಯಾರಿ ನಡೆಯುತ್ತಿದ್ದುದಾಗಿ ಕಂಡುಬಂದಿತು. ಮಾಹಿತಿ ತಿಳಿದ ಹಾಸನ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಅಂದಾಜು 288 ಕಿಲೋ ತೂಕದ ಬೀಜವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು ರೂ. 1.55 ಲಕ್ಷ ಎಂದು ಅಂದಾಜಿಸಲಾಗಿದೆ.

ದಾಳಿಯಲ್ಲಿ ಹೈಟೆಕ್ ಸಂಸ್ಥೆಯ ಬಿತ್ತನೆ ಬೀಜವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣ ದಾಖಲಿಸಲಾಗಿದ್ದು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ತೀರ್ಥ ಪ್ರಸಾದ್ ಹಾಗೂ ಡಿಕೆ ಯೋಗಾನಂದ ಅವರು ಭಾಗವಹಿಸಿದ್ದರು.