ತುಮಕೂರು: “ನಮ್ಮ ಕನಸು, ನಮ್ಮ ತುಮಕೂರು” ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನಡೆಯುತ್ತಿರುವ ಒಂದು ಪ್ರಾಮಾಣಿಕ ಪ್ರಯತ್ನ. ಇದರಲ್ಲಿ ಜಿಲ್ಲೆಯ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿಯ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗ ಹಾಗೂ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಕೈಗೊಂಡಿದ್ದ ನಮ ಕನಸು, ನಮ್ಮ ತುಮಕೂರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳ್ನಾಡಿದ ಅವರು,ಬೆಂಗಳೂರಿಗೆ ಅತಿ ಕಡಿಮೆ ದೂರದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ಒಳ್ಳೆಯ ರಸ್ತೆಗಳಿಲ್ಲ.ಸಾವಿರಾರು ಎಕರೆಯಲ್ಲಿ ಕೈಗಾರಿಕೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗವಿಲ್ಲ.

ರಾಜಕೀಯವಾಗಿ, ಅರ್ಥಿಕವಾಗಿ, ಔದ್ಯೋಗಿಕವಾಗಿಯೂ ಹಿಂದೆ ಉಳಿದಿದೆ.ಹಾಗಾಗಿ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಎಲ್ಲಾ ತಾಲ್ಲೋಕು, ಹೋಬಳಿ ಹಂತದಲ್ಲಿಯೂ ಅಲ್ಲಿನ ಯುವಜನತೆ, ಮುಖಂಡರುಗಳು,ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ಇಂದು ವಿವಿಧ ವಲಯಗಳ ಜನರು,ತುಮಕೂರು ಜಿಲ್ಲೆಯ ಅಭಿವೃದ್ದಿ ತಮ್ಮ ದೂರದೃಷ್ಟಿ ಚಿಂತನೆಗಳೇನು ಎಂಬುದನ್ನು ಹಂಚಿಕೊಳ್ಳುವ ಸಲುವಾಗಿ ದುಂಡು ಮೇಜಿನ ಸಭೆ ಕರೆಯಲಾಗಿದೆ.

ರೈತರು, ಕಾರ್ಮಿಕರು, ಕ್ರೀಡಾಪಟುಗಳು,ಮಾಜಿ ಸೈನಿಕರು, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಜನರು ಸಹ ಪಾಲ್ಗೊಂಡಿದ್ದಾರೆ. ಅವರೆಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವ ಯೋಜನೆಗಳ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ತುಮಕೂರು ಜಿಲ್ಲೆಯ ಶೈಕ್ಷಣಿವಾಗಿ ಸಾಕಷ್ಟು ಮುಂದುವರೆದಿದ್ದರೂ 10 ತಾಲೂಕುಗಳಿರುವ ಈ ಜಿಲ್ಲೆಗೆ ಒಂದು ಸರಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಿನ ಅಗತ್ಯವಿದೆ. ನಾಲ್ಕು ತಾಲೂಕುಗಳ ಸಂಗಮ ಬಿಂದುವಾದ ಕೆ.ಬಿ.ಕ್ರಾಸ್‌ನಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾದರೆ ಹೆಚ್ಚಿನ ಅನುಕೂಲ ಜಿಲ್ಲೆಯ ಜನರಿಗೆ ಆಗಲಿದೆ.

ಯುವ ಸಬಲೀಕರಣ ಇಲಾಖೆಯ ಉದ್ದೇಶಿಸಿ ಬಹು ಕೌಶಲ್ಯ ತರಬೇತಿ ಕೇಂದ್ರದ ಕಾರ್ಯಾರಂಭ ಇನ್ನಿತರ ವಿಚಾರಗಳ ಕುರಿತು ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಮುರುಳೀಧರ ಹಾಲಪ್ಪ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ರಿಜಿಸ್ಟಾರ್ ನಾಹಿದ್ ಜಮ್ಹ್ ಜಮ್ಹ್ ವಹಿಸಿದ್ದರು. ಪ್ರೊ. ಪರುಶುರಾಮ್, ಕಲ್ಪನಾ, ಆನಂತಗುರೂಜಿ, ಶಶಿಧರ್, ಕೆ.ಎಸ್.ಸಿದ್ದಲಿಂಗಪ್ಪ, ಗಂಗಹನುಮಯ್ಯ ಸೇರಿದಂತೆ ಹಲವರು ಪಾಲ್ಗೊಂಡು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
- ಕೆ.ಬಿ.ಚಂದ್ರಚೂಡ