ಕೆ.ಆರ್.ಪೇಟೆ-ಪರಿಶಿಷ್ಟ ಜಾತಿ-ಹಾಗೂ-ಪರಿಶಿಷ್ಟ-ವರ್ಗಗಳ-ವಿದ್ಯಾರ್ಥಿ-ನಿಲಯಕ್ಕೆ-ಕಂಪ್ಯೂಟರ್-ಗೀಸರ್-ಸ್ಟೌವ್‌ಗಳ-ವಿತರಣೆ- ಸರ್ಕಾರದ-ಸವಲತ್ತುಗಳನ್ನು-ಸದ್ಬಳಕೆ-ಮಾಡಿಕೊಂಡು-ಸಾಧನೆ- ಮಾಡಲು-ಪಂಕಜಾ-ಕರೆ

ಕೆ.ಆರ್.ಪೇಟೆ– ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಯರು ಸರ್ಕಾರವು ನೀಡುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ಪರೀಕ್ಷಾ ಭಯವನ್ನು ಹೋಗಲಾಡಿಸಿಕೊಂಡು ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಎದುರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಪಂಕಜಾ ಮನವಿ ಮಾಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯಕ್ಕೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಂಪ್ಯೂಟರ್‌ಗಳು, ಗೀಸರ್‌ಗಳು ಹಾಗೂ ಸ್ಟೌವ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.

ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಸರ್ಕಾರವು ಕೋಟ್ಯಂತರ ರೂಪಾಯಿ ಅನುದಾನವನ್ನು ಖರ್ಚು ಮಾಡುತ್ತಿದೆ. ಕೆ.ಆರ್.ಪೇಟೆ ಪುರಸಭೆಯ ಎಸ್.ಸಿ/ಎಸ್.ಟಿ ಅನುದಾನದಿಂದ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪುರಸಭೆಯ ನಿಧಿ ಹಾಗೂ ಅನುದಾನದಿಂದ ಕಂಪ್ಯೂಟರ್, ಲ್ಯಾಪ್‌ಟಾಪ್, ಗೀಸರ್‌ಗಳು, ಸ್ಟೌವ್‌ಗಳು, ಕುಡಿಯುವ ನೀರಿನ ಶುದ್ಧೀಕರಣ ಘಟಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ಇಲಾಖೆಯ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡುತ್ತಿದ್ದೇವೆ. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿ ಗುರಿಯನ್ನು ಮುಟ್ಟಬೇಕಾದರೆ ಕಂಪ್ಯೂಟರ್ ಮತ್ತು ಆಂಗ್ಲಭಾಷಾ ಜ್ಞಾನವು ಅತ್ಯಗತ್ಯವಾಗಿ ಬೇಕಾಗಿದೆ.

ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿಕೊಂಡು ತಮ್ಮ ಜ್ಞಾನಶಕ್ತಿಯನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಗುರಿಸಾಧನೆ ಮಾಡಬೇಕು. ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾದ್ದರಿಂದ ಪರೀಕ್ಷೆಗೆ ಹೆದರದೇ ತಾವು ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡಿರುವ ವಿಷಯವನ್ನು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತಮ್ಮ ಗುರುಹಿರಿಯರು ಹಾಗೂ ತಂದೆತಾಯಿಗಳಿಗೆ ಕೀರ್ತಿಯನ್ನು ತರುವ ಜೊತೆಗೆ ವೈಧ್ಯಕೀಯ, ತಾಂತ್ರಿಕ ಶಿಕ್ಷಣ ಸೇರಿದಂತೆ ನಿಮ್ಮ ಜೀವನವನ್ನು ಯಶಸ್ವಿಯಾಗಿ ಕಟ್ಟಿಕೊಳ್ಳಲು ಬೇಕಾದ ವೃತ್ತಿ ಶಿಕ್ಷಣ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆದುಕೊಂಡು ಅತ್ಯುನ್ನತವಾದ ಸಾಧನೆ ಮಾಡಬೇಕು ಎಂದು ಪುರಸಭಾ ಅಧ್ಯಕ್ಷೆ ಪಂಕಜಾ ಕರೆ ನೀಡಿದರು.

ಪುರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬೂ, ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಸ್ವರ್ಣಜಯಂತಿ ಶಹರೀ ರೋಜ್‌ಗಾರ್ ಯೋಜನಾಧಿಕಾರಿ ಭಾರತಿ ಅನಂತಶಯನ, ಮುಖ್ಯಾಧಿಕಾರಿ ನಟರಾಜು, ತಾಲೂಕು ಸಮಾಜಕಲ್ಯಾಣಾಧಿಕಾರಿ ದಿವಾಕರ್, ನಿಲಯಪಾಲಕಿ ಪುಷ್ಪಾ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?