ಎಚ್.ಡಿ.ಕೋಟೆ: ತಾಲೂಕಿನ ಕೇಂದ್ರ ಸ್ಥಾನ ಹೆಚ್.ಡಿ. ಕೋಟೆಯಿಂದ ಸರಗೂರು ಗೆ ಸಂಜೆ 5ಗಂಟೆಯ ನಂತರ ರಾತ್ರಿ 7:30, 8ಗಂಟೆವರೆಗೂ ಬಸ್ ಇಲ್ಲದೆ ಪ್ರಯಾಣಿಕರು ದಿನ ನಿತ್ಯ ಪರದಾಡುವಂತಾಗಿದೆ.
ಅವಳಿ ತಾಲೂಕುಗಳ ಜನತೆ ಆಸ್ಪತ್ರೆ, ಉದ್ಯೋಗ, ವ್ಯಾಪಾರ, ಸೇರಿದಂತೆ ವಿವಿಧ ಕಾರಣಗಳಿಂದ ದೂರದೂರುಗಳಿಂದ ಪಟ್ಟಣಕ್ಕೆ ಬಂದು ಇಲ್ಲಿಂದ ತೆರಳುತ್ತಾರೆ. ಬಡ ಜನತೆ ಬಸ್ಸನ್ನೇ ಅವಲಂಬಿಸಿರು ವುದರಿಂದ ತಮ್ಮ ಗ್ರಾಮಗಳಿಗೆ ತೆರಳಲು ಸಮಯಕ್ಕೆ ಬಸ್ ಸಿಗದೇ ನಿಲ್ದಾದಲ್ಲೇ ಕಾದು, ಕಾದು ಸುಸ್ತಾಗಿತ್ತಿದ್ದಾರೆ.
ತಾಲೂಕಿನಲ್ಲಿ ಡಿಪೋ ನಿರ್ಮಾಣವಾಗುವ ಮೊದಲು ಹೆಚ್.ಡಿ.ಕೋಟೆಯಿಂದ ಸರಗೂರಿಗೆ ಪ್ರತಿ ಹದಿನೈದು, 20 ನಿಮಿಷಗಳಿಗೊಮ್ಮೆ ಬಸ್ ಸೌಲಭ್ಯವಿತ್ತು. ಇದೀಗ ಇಲ್ಲೇ ಡಿಪೋ ಇದ್ದರು ಸರಗೂರು ಗೆ ಬಸ್ ಸೌಲಭ್ಯವಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿ ಅಸಡ್ಡೆ : ಈ ಬಗ್ಗೆ ವೈಭ್ರೆಂಟ್ ಮೈಸೂರು ಮಾಧ್ಯಮ ಹೆಚ್.ಡಿ.ಕೋಟೆ ಘಟಕ ವ್ಯವಸ್ಥಾಪಕ ಮಹದೇವ ಪ್ರಸಾದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೇಳಿದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಅಸಡ್ಡೆಯಾಗಿ ಉತ್ತರಿಸಿದ್ದಾರೆ.
ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಆಕ್ರೋಶ:-
ಹೆಚ್.ಡಿ.ಕೋಟೆಯಲ್ಲಿಯೇ ರಾತ್ರಿ 7:30, 8 ಗಂಟೆಯಾದರೆ, ನಾವು ಸರಗೂರು ತಲುಪಿ ಮನೆ ಸೇರುವುದು ಯಾವಾಗ ಅಡುಗೆ ಮಾಡುವಷ್ಟರಲ್ಲಿ ಮಧ್ಯರಾತ್ರಿಯಾಗುತ್ತದೆ ಎಂದು ಕಾಡಂಚಿನ ಗ್ರಾಮಗಳ ಮಹಿಳೆಯರು ಹಾಗೂ ವೈಭ್ರೆಂಟ್ ಮೈಸೂರು ಜೊತೆ ಅಳಲು ತೋಡಿಕೊಂಡರು. ಈ ಸಮಸ್ಯೆ ಬಗ್ಗೆ ಹಲವು ವರ್ಷಗಳಿಂದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದಿದ್ದೇವೆ. ಹಲವಾರು ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಶಾಸಕರೂ ಸ್ಪಂದಿಸುತ್ತಿಲ್ಲ ಅತ್ತ ಅಧಿಕಾರಿಗಳೂ ಸಮಸ್ಯೆ ಬಗೆಹರಿಸುತ್ತಿಲ್ಲ. ಬಡವರ ಮಾತು ಕೇಳುವವರಾರು ಎಂದು ಹೆಸರೇಳಲಿಚ್ಛಿಸದ ಮಹಿಳಾ ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡರು.
ಕೆಎಸ್ ಆರ್ ಟಿಸಿ ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ, ಸಂಜೆ ವೇಳೆಯಲ್ಲಿ ಎಚ್.ಡಿ.ಕೋಟೆಯಿಂದ ಸರಗೂರಿಗೆ ಬಸ್ ಗಳು ಇಲ್ಲದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದರು.
- ಶಿವಕುಮಾರ, ಹೆಚ್.ಡಿ.ಕೋಟೆ