ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರ ಬಗ್ಗೆ ಸುಳ್ಳು ವಿಚಾರಗಳನ್ನು ಸೃಷ್ಟಿಸಿ ಅವರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನದ ಆರೋಪದ ವರದಿಗಳ ಹಿನ್ನೆಲೆಯಲ್ಲಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘಗಳ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿ.ಪ್ರಭು ಅವರು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಇಡೀ ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯನ್ನು ಪ್ರಥಮ ಸ್ಥಾನದಲ್ಲಿರುವಂತೆ ಕರ್ತವ್ಯ ನಿರ್ವಹಿಸಿರುತ್ತಾರೆ. ಇದಕ್ಕಾಗಿ ರಾಜ್ಯ ಸರ್ಕಾರದ 2024-25ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಂದ ಪಡೆದಿದ್ದಾರೆ.
ಮಿಷನ್-5೦೦ ಎಂಬ ವಿನೂತನ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಅರಣ್ಯೀಕರಣ, ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಿ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
2023-24 ಮತ್ತು 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ವಿಶೇಷ ಅಭಿಯಾನ ಕೈಗೊಂಡು ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ಕಟ್ಟಡ, ಆಟದ ಮೈದಾನ, ಕಾಂಪೌಂಡ್, ಶೌಚಾಲಯ, ಭೋಜನಾಲಯ ನಿರ್ಮಿಸಿ ಉತ್ತಮ ಕಲಿಕಾ ವಾತಾವರಣ ಒದಗಿಸಿ ಶೈಕ್ಷಣಿಕ ಪ್ರಗತಿಗೆಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತುಮಕೂರು ಆರೋಗ್ಯ ಅಭಿಯಾನ ಎಂಬ ಕಾರ್ಯಕ್ರಮ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಉಚಿತ ಆರೋಗ್ಯತಪಾಸಣೆ, ನೇತ್ರ ಶಸ್ತ್ರ ಚಿಕಿತ್ಸೆ ಸೇವೆ ಒದಗಿಸಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದಾರೆ. ಜಿಲ್ಲೆಯ ಗ್ರಾಮೀಣ ಆಡಳಿತದ ಮುಖ್ಯಸ್ಥರಾಗಿ ಎಲ್ಲಾಅಧೀನ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ನಾಯಕತ್ವ ವಹಿಸಿಕೊಂಡು ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ.
ಈ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಅಧೀನ ನೌಕರರು ತೀವ್ರತರವಾದ ಕರ್ತವ್ಯಲೋಪ ಎಸಗಿದಾಗ ಎಚ್ಚರಿಕೆಯ ನೋಟೀಸುಗಳನ್ನು ನೀಡಿದಾಗ್ಯೂ ತಿದ್ದಿಕೊಳ್ಳದೇ ಇದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ಅವರ ವಿರುದ್ಧ ಅಮಾನತ್ತಿನಂತಹ ಶಿಸ್ತು ಕ್ರಮಕೈಗೊಂಡಿರುತ್ತಾರೆ.ಈ ವೇಳೆ ಅಧಿಕಾರಿ ಅಥವಾ ನೌಕರನ ಧರ್ಮ, ಜಾತಿಯನ್ನು ಪರಿಗಣಿಸದೆ ಕ್ರಮ ಕೈಗೊಂಡಿದ್ದಾರೆ.
ಇದೇ ಅವಧಿಯಲ್ಲಿ ಪಂಚಾಯತ್‌ರಾಜ್ ಇಲಾಖೆಯ ಒಟ್ಟು 22 ಅಧಿಕಾರಿ/ನೌಕರರನ್ನು ಅಮಾನತು ಮಾಡಿದ್ದು ಇವರಲ್ಲಿ ಸಾಮಾನ್ಯ ವರ್ಗದ 14 ಜನ, ಪರಿಶಿಷ್ಟ ಪಂಗಡದ ಒಬ್ಬರು ಹಾಗೂ ಪರಿಶಿಷ್ಟ ಜಾತಿಯ 7 ಜನರನ್ನು ವಿವಿಧ ಕಾರಣಕ್ಕೆ ಅಮಾನತುಗೊಳಿಸಿರುತ್ತಾರೆ. ಅಮಾನತ್ತಾದ ಪರಿಶಿಷ್ಟ ಜಾತಿಯ 7 ಜನರ ಪೈಕಿ ಇಬ್ಬರು ಲೋಕಾಯುಕ್ತ ಟ್ರಾಪ್‌ನಲ್ಲಿ ಸಿಲುಕಿದ್ದಾರೆ.

ಇತ್ತೀಚೆಗೆ ಅಮಾನತ್ತಾದ ಇಬ್ಬರನ್ನು ಹೊರತುಪಡಿಸಿ ಉಳಿದ 2೦ ಅಧಿಕಾರಿ/ನೌಕರರಿಗೆ ಅಮಾನತು ತೆರವುಗೊಳಿಸಿ ಪುನರ್ ಸ್ಥಳ ನಿಯುಕ್ತಿ ಮಾಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಕಾರ್ಯ ನಿರ್ವಹಿಸಲು ಅವಕಾಶ ನೀಡಿರುತ್ತಾರೆ. ಸದರಿ ನೌಕರರ ವಿರುದ್ಧದ ಇಲಾಖಾ ವಿಚಾರಣೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ವಿಚಾರಣಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಇಲಾಖೆಯ ಸಭೆಗಳಲ್ಲಿ ಪ್ರಗತಿ ಕುಂಠಿತವಾಗಿರುವ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಓಗಳು ಮತ್ತು ಇತರೆ ಸಿಬ್ಬಂದಿಗೆ ಎಚ್ಚರಿಕೆ ನೀಡಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆಗಳಿವೆ. ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದಲಿತ ನೌಕರರನ್ನು ಗುರಿಯಾಗಿಸಿಕೊಂಡು ಶಿಸ್ತು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹಾಗೂ ದಲಿತ ವಿರೋಧಿ ಎಂಬಂತೆ ಬಿಂಬಿಸಿ ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ಗಮನಿಸಿದ್ದೇವೆ.
ಇದರ ಹಿಂದೆ ಯಾವುದೇ ಪ್ರಭಾವಿಗಳು ಮತ್ತು ನಮ್ಮದೇ ಇಲಾಖೆಯ ಕೆಲ ಹೊರಗುತ್ತಿಗೆ ನೌಕರರ ಕೈವಾಡ ಇರುವ ಗುಮಾನಿ ಇರುತ್ತದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಸುನಿಲ್‌ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗರಾಜು, ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಸುರೇಶ್, ಪಿಡಿಓಗಳಾದ ಹನುಮಂತರಾಜು, ಶ್ರೀನಿವಾಸ್, ಶಿವಾನಂದ್ ಸಾತಿಹಾಳ್, ಟಿ.ವಿ.ಶ್ರೀನಿವಾಸಮೂರ್ತಿ, ಚಂದ್ರಹಾಸ್, ತೇಜಸ್, ಯುವರಾಜು ಹಾಗೂ ಪದಾಧಿಕಾರಿಗಳು ಈ ವೇಳೆ ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
-ಕೆ.ಬಿ.ಚಂದ್ರಚೂಡ