ಕೊಟ್ಟಿಗೆಹಾರ: ಕಾದ ಕಾವಲಿಯಂತಾಗಿದ್ದ ಜಿಲ್ಲೆಯ ಮಲೆನಾಡು ಭಾಗಕ್ಕೆ ವರುಣದೇವ ಕೃಪೆ ತೋರಿದ್ದು, ಕಳೆದೊಂದು ಗಂಟೆಯಿಂದ ಮೂಡಿಗೆರೆ ತಾಲೂಕಿನ ಸುತ್ತಮುತ್ತ ಬಿರುಗಾಳಿ-ಗುಡುಗು-ಸಿಡಿಲಿನ ಜೊತೆ ಧಾರಾಕಾರ ಆಲಿಕಲ್ಲು ಮಳೆ ಸುರಿಯುತ್ತಿತ್ತು ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಸಾಗರ್ ಎಂಬುವರ ಮನೆ ಅಂಗಳದಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದ್ದು ಮನೆಯವರು ಪಾತ್ರೆಯಲ್ಲಿ ಆಲಿಕಲ್ಲುಗಳನ್ನ ತುಂಬಿಟ್ಟಿದ್ದರು. ಸಾಗರ್ ಅವರ ಮನೆಯಂಗಳದಲ್ಲಿ ಮಲ್ಲಿಗೆ ಹೂ ಸುರಿದಂತೆ ಭಾಸವಾಗುವ ರೀತಿ ಆಲಿಕಲ್ಲು ಬಿದ್ದದ್ದವು.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್ ಬಾಳೂರು, ಹೊರಟ್ಟಿ, ಸಬ್ಬೇನಹಳ್ಳಿ, ಬಿನ್ನಡಿ, ಅತ್ತಿಗೆರೆ ಸೇರಿದಂತೆ ಸುತ್ತಮುತ್ತ ಆಲಿಕಲ್ಲು ಸಮೇತ ಭಾರೀ ಮಳೆಯಾಗಿದೆ. ಮಲೆನಾಡಲ್ಲಿ ಹೆಚ್ಚು-ಕಡಿಮೆ ಕಳೆದ 15 ದಿನದಿಂದಲೂ ದಿನ ಬಿಟ್ಟು ದಿನ ಮಳೆಯಾಗುತ್ತಿತ್ತು. ಮಳೆಗಾಲದ ಮಳೆಯನ್ನೂ ನಾಚಿಸುವಂತೆ ಧಾರಾಕಾರ ಮಳೆಯಾಗುತ್ತಿತ್ತು. ಫೆಬ್ರವರಿಯಿಂದ ಮೇ ಅಂತ್ಯದವರೆಗೆ ಕಾಫಿನಾಡ ಮಲೆನಾಡು ಭಾಗದ ರೈತರು-ಬೆಳೆಗಾರರಿಗೆ ಅಡಿಕೆ-ಕಾಫಿ-ಮೆಣಸಿಗೆ ನೀರಾಯಿಸುವುದೇ ದೊಡ್ಡ ಸಾವಲು. ನೀರಾಯಿಸಲು ಬೆಳೆಗಾರರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ, ಈ ಬಾರಿ ಬೇಸಿಗೆಯಲ್ಲಿ ಉತ್ತಮಳೆಯಾಗ್ತಿರೋದು ಬೆಳೆಗಾರರಿಗೆ ಸಂತಸ ತಂದಿತ್ತು.

ಆದರೆ, ಇಂದು ಮೂಡಿಗೆರೆ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿರೋದು ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಕಾಫಿ ಹೂವು ಹಾಗೂ ಕಾಯಾಗುವ ಈ ವೇಳೆ ಆಲುಕಲ್ಲು ಮಳೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಾಫಿ ಬೀಜದ ಮೇಲೆ ಆಲಿಕಲ್ಲು ಬಿದ್ದು ಹಣ್ಣಾಗುವ ಮೊದಲೇ ಕಾಫಿ, ಕುಳಿತು ಹೋಗುವ ಸಾಧ್ಯತೆ ಇದೆ. ಹಾಗಾಗಿ, ಕಾಫಿ ಬೆಳೆಗಾರರಿಗೆ ಈ ಆಲಿಕಲ್ಲು ಮಳೆ ಕಂಡು ಸಂತೋಷ ಪಡಬೇಕು ಅಥವಾ ದುಃಖ ಪಡಬೇಕು ಅರ್ಥವಾಗದಂತಾಗಿದೆ. ಕೇವಲ ಮೂಡಿಗೆರೆ ತಾಲೂಕಿನಲ್ಲಷ್ಟೆ ಅಲ್ಲದೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹಾಗೂ ಕಳಸ ತಾಲೂಕಿನಲ್ಲೂ ಭಾರೀ ಮಳೆಯಾಗಿದೆ. ಬಿರುಗಾಳಿ ಗುಡುಗು-ಸಿಡಿಲಿನ ಸಮೇತ ಧಾರಾಕಾರವಾಗಿ ಆಲುಕಲ್ಲು ಮಳೆ ಸುರಿಯುತ್ತಿದ್ದು ಮಲೆನಾಡಿಗರು ಒಂದೆಡೆ ಸಂತಸಗೊಂಡಿದ್ರೆ ಮತ್ತೊಂದೆಡೆ ಆತಂಕಕ್ಕೀಡಾಗಿದ್ದಾರೆ.