ತುಮಕೂರು-ವಕ್ಫ್-ತಿದ್ದುಪಡಿ-ಮಸೂದೆ-ವಿರೋಧಿಸಿ-ಜಾಮಿಯಾ- ಮಸೀದಿಯಲ್ಲಿ-ಪ್ರತಿಭಟನೆ


ತುಮಕೂರು: ‌ ನಗರದ ಮಂಡಿಪೇಟೆಯ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಜನಾಂಗದ ಮುಖಂಡ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ ಅಂಡ್ ಅಕ್ಯಾಡೆಮಿ ಅಧ್ಯಕ್ಷ ನಿಸಾರ್ ಅಹಮದ್ (ಆರಿಫ್), ’ದೇಶದಲ್ಲಿ ಎಲ್ಲ ಸಮುದಾಯದವರಿಗೂ ಅವರದ್ದೇ ಆದ ಹಬ್ಬ, ಆಚರಣೆ, ಪೂಜೆ, ನಮಾಜ್ ಮಾಡುವ ಹಕ್ಕನ್ನು ಕಾನೂನಿನಲ್ಲಿ ನೀಡಲಾಗಿದೆ. ಆದರೆ ಈಗಿನ ಕೇಂದ್ರ ಸರ್ಕಾರ ಸಮಾಜದಲ್ಲಿ ಶಾಂತಿ ಭಂಗ ಮಾಡುವಂತಹ, ಜನ ವಿರೋಧಿ ಕಾನೂನುಗಳನ್ನು ರೂಪಿಸಲು ಮುಂದಾಗಿದ್ದು, ಇದನ್ನು ನಾವು ಬಲವಾಗಿ ಖಂಡೀಸುತ್ತೇವೆ. ಇದು ದ್ವೇಷಪೂರಿತ ಕಾನೂನಾಗಿದೆ’ ಎಂದರು.

ಇಸ್ಲಾಮಿಕ್ ಕಾನೂನಿನ ಪ್ರಕಾರ, ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿಯಾಗಿದೆ. ಅಂತಹ ಆಸ್ತಿಗಳಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಮಸೀದಿಗಳನ್ನು ನಿರ್ವಹಿಸಲು, ಶಾಲೆಗಳಿಗೆ ಹಣಕಾಸು ಒದಗಿಸಲು ಅಥವಾ ಬಡವರಿಗೆ ನೆರವಾಗಲು ಬಳಸಲಾಗುತ್ತದೆ.


ವಕ್ಫ್ (ತಿದ್ದುಪಡಿ) ಮಸೂದೆ 2024, ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸೂಚಿಸುವ ಕಾರಣ ಮುಸ್ಲಿಂ ಸಮುದಾಯದ ಕಳವಳಕ್ಕೆ ಕಾರಣವಾಗಿದೆ. ಇದರಲ್ಲಿ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆ ಕಳವಳ ಹೆಚ್ಚಿಸಿದೆ. ಇದು, ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುವ ೩೦ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸರ್ಕಾರ ಕೂಡಲೇ ಈ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು. ನಿರ್ದಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಕಠಿಣ ಕಾನೂನು ಜಾರಿ ಕ್ರಮಗಳನ್ನು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟಗಳು ನಡೆಯಲಿವೆ’ ಎಂದು ನಿಸಾರ್ ಅಹಮದ್ (ಆರಿಫ್) ಎಚ್ಚರಿಸಿದರು.


ಜಾಮಿಯಾ ಮಸೀದಿ ಖತೀಬೇ ಇಮಾಂ ಮುಫ್ತಿ ಸೈಯದ್ ಆರೀಫ್, ಜನಾಂಗದ ಮುಖಂಡರಾದ ನಾಸಿರ್ ಖಾನ್, ಶಂಶೀರ್ ಅಹಮದ್, ಜವಾದ್ ಹುಸೈನ್, ಸವೂದ್ ಅಹಮದ್, ಸಮೀಉಪ್ಪಾ, ಮಹಮದ್ ಇದೀಸ್, ನಾವಾಜ ಅಹಮದ್ ಸೇರಿದಂತೆ ಸುಮಾರು ೫೦೦ಕ್ಕೂ ಹೆಚ್ಚು ಮುಸ್ಲಿಂಬಾಂಧವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?