ಸರಗೂರು-ರಸ್ತೆಗಾಗಿ‌-ಆಗ್ರಹ-ನಾಟಿ-ಮಾಡಿ-ಪ್ರತಿಭಟನೆ

ಸರಗೂರು: ಸಮೀಪದ ಹಂಚೀಪುರ ಗ್ರಾ.ಪಂ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಲು ಆಗ್ರಹಿಸಿ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡಲಾಯಿತು.

ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಜಿಲ್ಲಾ ಸಂಚಾಲಕ ಟಿ.ಆರ್.ಸುನಿಲ್ ಮಾತನಾಡಿ, ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಹಣ ಮಂಜೂರಾಗಿ ಹಲವು ತಿಂಗಳುಗಳು ಕಳೆದಿದ್ದರು ಇದುವರೆಗೂ ರಸ್ತೆ ಕಾಮಗಾರಿ ಕೆಲಸ ಪ್ರಾರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಮಗಾರಿಯ ಹೊಣೆ‌ ಹೊತ್ತ ಇಲಾಖೆಯ ಅಧಿಕಾರಿಗಳು ಕಳೆದ ವರ್ಷ ಡಿ.ರಂದು ಭೇಟಿ‌ ನೀಡಿ ಜನವರಿಯಿಂದ ಕಾಮಗಾರಿ ಪ್ರಾರಂಭಿಸಿ ಏಪ್ರಿಲ್ ವೇಳೆಗೆ ರಸ್ತೆಯನ್ನು ಸಾರ್ವಜನಿಕರ ಸೌಲಭ್ಯಕ್ಕೆ ನೀಡಲಾಗುವುದು ಎಂದು ಹೇಳಿ ಹೋದವರು ಇಲ್ಲಿಯವರೆಗೂ ಯಾರೊಬ್ಬರೂ ರಸ್ತೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಈಗಾಗಲೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬೇಸಿಗೆಯಲ್ಲಿ ಬಿದ್ದ ಒಂದು ದಿನದ ಮಳೆಯಿಂದಾಗಿಯೇ ಆಳವಾದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಲ್ಲಲ್ಲಿ ನೀರಿನ ಹೊಂಡಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಈ ಹಾಡಿಯಿಂದ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ಶಾಲೆಗೂ ಸಹ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಅನಾರೋಗ್ಯ ಪೀಡಿತ ಬಾಣಂತಿಯರು, ಗರ್ಭಿಣಿಯರು, ವೃದ್ದರು ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ಅಪಾಯಕಾರಿಯಾಗಿರುತ್ತದೆ. ನಾಗರಿಕ ಸಮಾಜದಲ್ಲಿ ಬದುಕುವ ಯಾವುದೇ ಸೌಲಭ್ಯಗಳು ಸರಿಯಾಗಿ ಇಲ್ಲದೇ ಈ ಹಾಡಿಯಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಜನರು ಬದುಕುತ್ತಿದ್ದಾರೆ. ಜನಪ್ರತಿನಿಧಿ ಗಳು ತಮ್ಮ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಳ್ಳುವಾಗ ಯಾವ ವಿಳಂಬವಾಗದಿರುವಾಗ ಜನ ಸಾಮಾನ್ಯರ ಕೆಲಸ ಮಾಡುವಾಗ ವಿನಾಕಾರಣ ವಿಳಂಬ ಮಾಡುವುದೇಕೆ ಎಂದು ಪ್ರಶ್ನಿಸಿದರು.

ಮಳೆಗಾಲ ಪ್ರಾರಂಭವಾಗುವ ಮುನ್ನವೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ರಸ್ತೆ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ದಡದಹಳ್ಳಿ ಹಾಡಿ ಮುಖಂಡರಾದ ನಂಜುಂಡ, ಕಾವ್ಯ,ರೇಖಾ,ಶ್ರೀಧರ್, ಸೋಮಣ್ಣ, ಚಿಕ್ಕಮ್ಮ, ಕಾಳ, ಕರಿಯ, ಬೊಮ್ಮ, ಕುಳ್ಳಮ್ಮ, ಭಾಗ್ಯ ಸೇರಿದಂತೆ ಹಾಡಿಯ ಜನರು ಭಾಗವಹಿಸಿದ್ದರು.

– ಶಿವಕುಮಾರ

Leave a Reply

Your email address will not be published. Required fields are marked *

× How can I help you?