ಬೇಲೂರು, ಮೇ 17: ಬೇಲೂರು ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ಚಿಂದಿ ಆಯ್ದು ಬದುಕು ನಡೆಸುತ್ತಿದ್ದ ರವಿ (45) ಎಂಬ ನಿರ್ಗತಿಕ ವ್ಯಕ್ತಿ ಅನಾರೋಗ್ಯದಿಂದ ಇಂದು ಸಾವಿಗೀಡಾಗಿರುವ ಘಟನೆ ವಿಷಾದಕಾರಿ ಹಾಗೂ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಮೂಲತಃ ಬಾಣಾವರ ಪೋಲೀಸ್ ಠಾಣಾ ವ್ಯಾಪ್ತಿಯ ಸೂಲದಿಮ್ಮನಹಳ್ಳಿ ನಿವಾಸಿಯಾಗಿದ್ದ ರವಿ, ಕುಟುಂಬ ತ್ಯಜಿಸಿ ಬೇಲೂರಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತಲೇ ಬೀದಿಬದಿಯ ಬದುಕು ನಡೆಸುತ್ತಿದ್ದ.

ಮಧ್ಯಾಹ್ನದವರೆಗೂ ಚನ್ನಾಗಿದ್ದ ರವಿ, ಸಂಜೆ ವೇಳೆಗೆ ತೀವ್ರ ಅನಾರೋಗ್ಯಕ್ಕೊಳಗಾದರು. ಅದೇ ಸಮಯದಲ್ಲಿ ಸುರಿಯುತ್ತಿದ್ದ ಮಳೆ ನಡುವೆ ಸ್ಥಳದಲ್ಲಿಯೇ ಅಸ್ವಸ್ಥರಾಗಿದ್ದು, ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಬೇಲೂರು ಸರ್ಕಲ್ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ತಕ್ಷಣವೇ ಧಾವಿಸಿದ 24×7 ಸಮಾಜ ಸೇವಾ ತಂಡದ ನೂರ್ ಅಹ್ಮದ್ ಮತ್ತು ಅವರ ತಂಡ, ತಮ್ಮ ಅಂಬುಲೆನ್ಸ್ ಮೂಲಕ ಮೃತದೇಹವನ್ನು ಶವಪರೀಕ್ಷೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ಘಟನಾ ಸ್ಥಳದಲ್ಲಿ ಹಾಜರಿದ್ದವರು:
- ಸಬ್ ಇನ್ಸ್‌ಪೆಕ್ಟರ್ ವಿರೂಪಾಕ್ಷ, ಎಸ್.ಐ ಮರಿಗೌಡ
- 24×7 ಸಮಾಜ ಸೇವಾ ತಂಡದ ಸದಸ್ಯರಾದ: ಸಂಪತ್, ಟಿ.ಸಿ. ಪ್ರದೀಪ್ ಮೋನಿ, ಸುನಿಲ್ ರಾಯಪುರ, ಅಂಬುಲೆನ್ಸ್ ಚಾಲಕ ಇಸ್ಮಾಯಿಲ್
- ಬೇಲೂರು ಪೋಲೀಸ್ ಸಿಬ್ಬಂದಿ
ಮೃತ ರವಿಗೆ ಯಾವುದೇ ಕುಟುಂಬಸ್ಥರ ಬಗ್ಗೆ ಮಾಹಿತಿ ಲಭಿಸಿಲ್ಲ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಪಡೆದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಘಟನೆ, ಬೇಲೂರಿನಂತಹ ಪ್ರಮುಖ ಹೇರಿಟೇಜ್ ಪಟ್ಟಣದಲ್ಲಿ ನಿರ್ಗತಿಕರ ದುರವಸ್ಥೆ ಹಾಗೂ ನಗರದಲ್ಲಿ ತಂಗುದಾಣದ ಕೊರತೆಯ ಕುರಿತು ಮತ್ತೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಗಳು ನಿರ್ಗತಿಕರ ಪುನರ್ವಸತಿ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿವೆ.