ಕೊಟ್ಟಿಗೆಹಾರ-ಕೊಟ್ಟಿಗೆಹಾರದಿಂದ ಕುದುರೆಮುಖ ಗಂಗಾಮೂಲ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನಗಳು ಸಂಚಾರ ಮಾಡಲು ಸಾಧ್ಯವೇ ಆಗದಂತಹ ದುಸ್ಥಿತಿಗೆ ತಲುಪಿದೆ.ಹಲವಾರು ತಿಂಗಳುಗಳಿಂದ ಮನುಷ್ಯ ಸಂಚಾರಕ್ಕೆ ಯೋಗ್ಯವಾಗದಂತಹ ಸ್ಥಿತಿಗೆ ತಲುಪಿರುವ ಈ ರಸ್ತೆಯನ್ನು ದುರಸ್ತಿಪಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಗೆ ನಿಡುವಾಳೆ ಗ್ರಾಮಪಂಚಾಯತಿ ಉಪಾಧ್ಯಕ್ಷ ನವೀನ ಹಾವಳಿ ಹತ್ತಾರು ಬಾರಿ ಮನವಿ ಮಾಡಿಕೊಂಡಿದ್ದರು ಅವರು ಕ್ಯಾರೇ ಎನ್ನುತ್ತಿಲ್ಲ.
ದಿನಂಪ್ರತಿ ಆ ರಸ್ತೆಯಲ್ಲಿ ವಾಹನಗಳು ಕೆಟ್ಟು ನಿಲ್ಲುತ್ತಿದ್ದು ಈ ಕಾರಣಕ್ಕೆ ಅಪಘಾತಗಳು ಘಟಿಸುತ್ತಿವೆ.ಬೈಕ್ ಸ್ಕಿಡ್ ಆಗಿ ಬಿದ್ದು ಕಾಲು ಕೈ ಮುರಿದುಕೊಂಡವರ ಲೆಕ್ಕ ಬೆಟ್ಟದಷ್ಟಿದೆ.ತಾಲೂಕು ಹಾಗು ಜಿಲ್ಲಾ ಮಟ್ಟದ ಲೋಕೋಪಯೋಗಿ ಅಧಿಕಾರಿಗಳಿಗೆ ಹಲವು ರೂಪದಲ್ಲಿ ಮನವಿ ಮಾಡಿಕೊಂಡು ರಸ್ತೆ ದುರಸ್ತಿ ಪಡಿಸುವಂತೆ ಕೇಳಿಕೊಂಡರು ಅವರು ಗಮನ ಹರಿಸುತ್ತಿಲ್ಲ ಎಂದು ಪತ್ರಿಕೆಯೊಂದಿಗೆ ಮಾತನಾಡಿದ ನವೀನ ಹಾವಳಿ ಆಕ್ರೋಶ ಹೊರಹಾಕಿದ್ದಾರೆ.
ದಿನನಿತ್ಯ ಸಾವಿರಾರು ಸ್ಥಳೀಯ ಹಾಗು ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.ಮಳೆಗಾಲವಾಗಿದ್ದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಿ ಮಳೆ ನಿಂತ ಮೇಲೆ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಿಕೊಡಿ ಎಂದು ಅವಲತ್ತುಕೊಂಡರು ದಪ್ಪ ಚರ್ಮದ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ.
ಪತ್ರಿಕೆಯ ಮೂಲಕ ಒಂದು ವಾರದ ಗಡುವನ್ನು ಅಧಿಕಾರಿಗಳಿಗೆ ಕೊಡುತ್ತಿದ್ದು ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆಯೆಂದು ನವೀನ ಹಾವಳಿ ಎಚ್ಚರಿಕೆ ನೀಡಿದ್ದಾರೆ.
—————–ಸಂತೋಷ್