ರಾಯಚೂರು ವಿಶ್ವವಿದ್ಯಾಲಯಕ್ಕೆ ‘ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ’-ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉತ್ತಮ ನಿರ್ಧಾರ

ಇಂದು ಬೆಂಗಳೂರಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಯಚೂರು ವಿಶ್ವವಿದ್ಯಾಲಯಕ್ಕೆ ‘ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಹೆಸರಿಡಲಾಗುವುದು ಎಂದು ಘೋಷಿಸಿದ್ದಾರೆ.

ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉತ್ತಮ ನಿರ್ಧಾರವಾಗಿದ್ದು ಅವರ ಈ ನಿಲುವು ಶ್ಲಾಘನೀಯ ಮತ್ತು ಅಭಿನಂದನಾರ್ಹವಾದುದು. ಕೆಲವರಿಗೆ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಕ ಸಮುದಾಯವನ್ನು ತುಷ್ಟೀಕರಣಗೊಳಿಸುವ ನೀತಿ ಇದು ಎನ್ನಿಸಬಹುದಾದರೂ ವಾಸ್ತವವಾಗಿ ಇದೊಂದು ಮಹತ್ವದ ನಿರ್ಣಯ.

ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವುದರಿಂದ ಈ ಭಾಗದಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ- ದರ್ಶನ,ಸಾಧನೆ- ಸಿದ್ಧಿಗಳ ಅಧ್ಯಯನ,ಸಂಶೋಧನೆ,ತತ್ತ್ವ – ಸಿದ್ಧಾಂತಗಳ ಪ್ರಚಾರಕ್ಕೆ ಅವಕಾಶ ದೊರೆಯಲಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಘೋಷಣೆಯನ್ನು ಆದಷ್ಟು ಬೇಗನೆ ಅನುಷ್ಠಾನಕ್ಕೆ ತರಬೇಕು.ಸ್ವತಃ ಅವರೇ ರಾಯಚೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದರೆ ಅದು ಮತ್ತಷ್ಟು ಔಚಿತ್ಯಪೂರ್ಣವಾಗುತ್ತದೆ.

  ಕೆಲವು ತಿಂಗಳುಗಳ ಹಿಂದೆ ಕಲ್ಬುರ್ಗಿಯಲ್ಲಿ ನಡೆದ ದಾಸಸಾಹಿತ್ಯದ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ವಿಜಯದಾಸರ ಹೆಸರನ್ನಿಡಬೇಕು ಎನ್ನುವ ಪ್ರಸ್ತಾವವನ್ನು ಮಹನೀಯರು ಒಬ್ಬರು ಹರಿಯಬಿಟ್ಟಿದ್ದರು.ನಾನು ಅದನ್ನು ಬಲವಾಗಿ ವಿರೋಧಿಸಿ ಲೇಖನ ಬರೆದಿದ್ದೆ.ವಿಜಯದಾಸರು ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿರಬಹುದು ಆದರೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇಡುವಷ್ಟು ಮಹೋನ್ನತ ವ್ಯಕ್ತಿತ್ವ ಅವರದ್ದು ಆಗಿರಲಿಲ್ಲ.ಆದರೆ ಕಲ್ಬುರ್ಗಿಯಲ್ಲಿ ನಡೆದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸುವ ಮೂಲಕ ರಾಯಚೂರಿನ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಪಾರಮ್ಯ ಪಡೆಯಲು ಕೆಲವರು ಹವಣಿಸಿದ್ದರು.ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಮರ್ಥನೀಯ, ಸರ್ವಜನಸಮ್ಮತಿಯ ನಿರ್ಣಯ ಕೈಗೊಂಡಿದ್ದಾರೆ.ಆದಷ್ಟು ಬೇಗ ನಾಮಕರಣವಾಗಲಿ.

   ದೇಶದಲ್ಲಿ ನಾಲ್ಕೈದು ವಿಶ್ವವಿದ್ಯಾಲಯಗಳಿಗೆ ಮಹರ್ಷಿ ವಾಲ್ಮೀಕಿಯವರ ಹೆಸರನ್ನು ಇಡಲಾಗಿದೆ.ಕರ್ನಾಟಕದಲ್ಲಿ ರಾಯಚೂರು ವಿಶ್ವವಿದ್ಯಾಲಯವು  ಮಹರ್ಷಿ ವಾಲ್ಮೀಕಿಯವರ ಹೆಸರನ್ನು ಹೊಂದುವ ಮೂಲಕ ರಾಷ್ಟ್ರದ ಗಮನಸೆಳೆಯಲಿದೆ.ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದರಷ್ಟೇ ಸಾಲದು,ಆ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿಯವರ‌ ಜೀವನ ಸಾಧನೆಗಳ ಅಧ್ಯಯನಕ್ಕಾಗಿ ಸ್ವತಂತ್ರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು.ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ ಸಾಧನೆ ಸಿದ್ಧಿಗಳ ಅಧ್ಯಯನದ ಪಠ್ಯಕ್ರಮ ಅಳವಡಿಸಬೇಕು, ಪದವಿ, ಎಂ ಎ ಲಿಟರೇಚರ್ ನಲ್ಲಿ ಮಹರ್ಷಿ ವಾಲ್ಮೀಕಿಯವರ ಹೆಸರಿನ ಎಂ ಎ ಕೋರ್ಸ್ ಕೂಡ ಪ್ರಾರಂಭಿಸಬೇಕು.

ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಅಧ್ಯಯನಕ್ಕೆ ಅವಕಾಶ ನೀಡುವ ಪಠ್ಯಕ್ರಮ ಅಳವಡಿಸಬೇಕು.ಮಹರ್ಷಿ ವಾಲ್ಮೀಕಿಯವರ ಚರಿತ್ರೆ- ಚಾರಿತ್ರ್ಯ,ಸಾಹಿತ್ಯ- ಸಂದೇಶಗಳ ಕುರಿತು ಸಂಶೋಧನೆ ಕೈಗೊಳ್ಳಲು ಅಧ್ಯಯನಾಸಕ್ತರುಗಳನ್ನು ಪ್ರೇರೇಪಿಸಬೇಕು.ಇಂತಹ ಹತ್ತು ಹಲವು ಕಾರ್ಯಕ್ರಮಗಳು ಏರ್ಪಡಬೇಕಿದೆ ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಿಂದ.ಮುಂಬರುವ ದಿನಗಳಲ್ಲಿ ಈ ಆಶಯ ಸಾಕಾರಗೊಳ್ಳಬಹುದು.

——————--ಮುಕ್ಕಣ್ಣ ಕರಿಗಾರ

Leave a Reply

Your email address will not be published. Required fields are marked *

× How can I help you?