ಅರಕಲಗೂಡು -ತಾಲೂಕಿನ ರಾಮನಾಥಪುರದಲ್ಲಿರುವ ಪುರಾತನ ಕಾಲದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಗೋಪುರದ ಕೆಲ ಅಚ್ಚು ಗೊಂಬೆಗಳು ಮಂಗಳವಾರದ ಭಾರಿ ಮಳೆಯಿಂದ ಬಿದ್ದುಹೋಗಿರುವ ಘಟನೆ ವರದಿಯಾಗಿದೆ.
ಈ ದೇವಾಲಯವು ಕಾವೇರಿ ನದಿಯ ದಂಡೆಯಲ್ಲಿದ್ದು, ಐದು ಯುಗಗಳ ಇತಿಹಾಸ ಹೊಂದಿರುವುದಾಗಿ ನಂಬಲಾಗಿದೆ. ಕ್ರತಯುಗದಲ್ಲಿ ಸಂವರ್ತಕೇಶ್ವರ, ತ್ರೇತಾಯುಗದಲ್ಲಿ ವಾಸುಕೀಶ್ವರ, ದ್ವಾಪರಯುಗದಲ್ಲಿ ವಹ್ನಿಶ್ವರ, ಮತ್ತು ಕಲಿ ಯುಗದಲ್ಲಿ ರಾಮೇಶ್ವರಸ್ವಾಮಿ ಎಂಬ ಹೆಸರಿನಿಂದ ಶಿವಲಿಂಗವನ್ನು ಪೂಜಿಸಲಾಗುತ್ತಿದೆ. ಮಹರ್ಷಿ ಭೃಗು ಶಾಪಕ್ಕೆ ಗುರಿಯಾದ ಅಗ್ನಿಗೆ ರಾಮೇಶ್ವರನು ಸಾನುರಾಗದಿಂದ ಪರಿಹಾರ ನೀಡಿದ ಪವಿತ್ರ ಸ್ಥಳವಿದು.

ಈ ಪವಿತ್ರ ದೇವಾಲಯದ ಗೋಪುರದ ಶಿಲ್ಪಗಳು ಹಾನಿಗೊಳಗಾಗುತ್ತಿರುವುದು ದುಃಖದ ವಿಚಾರ. ದೇವಾಲಯದ ಮಾಜಿ ಸಮಿತಿ ಸದಸ್ಯ ರಘು ಅವರು ದೇವಾಲಯದ ಜೀರ್ಣೋದ್ಧಾರಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕೆಂದು ಒತ್ತಾಯಿಸಿದರು.

ಶಾಸಕರ ಪ್ರತಿಕ್ರಿಯೆ:
ಕ್ಷೇತ್ರದ ಶಾಸಕ ಎ. ಮಂಜು ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಮನಾಥಪುರದ ದೇವಾಲಯವು ಶೀತಲವಾದ ವಾತಾವರಣವಿರುವ ಪುರಾತನ ದೇವಾಲಯವಾಗಿದ್ದು, ಮಂಟಪಗಳು ಹಾಗೂ ಶಿಲಾಶಾಸನಗಳು ಹಾನಿಗೊಳ್ಳುತ್ತಿವೆ ಎಂದರು.

ಈ ಹಿಂದೆಯೇ ದೇವಾಲಯದ ಸಮುಚ್ಚಯವನ್ನು ಬಿಚ್ಚಿ ತಳಪಾಯವನ್ನು ಭದ್ರಪಡಿಸಿ ಸಂರಕ್ಷಿಸುವ ಯೋಜನೆಗೆ 440 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಗೆ 2024–25ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿಯಲ್ಲಿ ಪುರಾತತ್ವ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಕೋರಲಾಗಿದ್ದು, ಈ ಬಗ್ಗೆ ಮಂತ್ರಿಗಳ ಬಳಿ ಅನುದಾನ ಬಿಡುಗಡೆಗಾಗಿ ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು.
ವರದಿ: ಕೆಲ್ಲೂರು ಶಶಿಕುಮಾರ್