ಕನ್ನಡ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ಗೆ ಅಮೇರಿಕಾದಿಂದ ಅತ್ಯುನ್ನತ ಗೌರವ

ಸ್ಯಾಂಡಲ್‌ವುಡ್‌ನ ಮೆಲೋಡಿ ಕಿಂಗ್‌ ಹಾಗೂ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಅವರು ಜಾಗತಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಇಂಪು ಧ್ವನಿಯಿಂದ ಕನ್ನಡದ ಸಂಗೀತ ಪ್ರಿಯರನ್ನು ರಂಜಿಸಿರುವ ಅವರ ಪ್ರತಿಭೆಯನ್ನು ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರ ಗುರುತಿಸಿದೆ.

ಇತ್ತೀಚೆಗೆ ಅಮೇರಿಕಾದಲ್ಲಿ ಅವರು ಕನ್ನಡಿಗರಿಗಾಗಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಕಂಠಸಿರಿಯಿಂದ ಮನಸೂರೆಗೊಳಿಸಿದ್ದರು. ಈ ಹಿನ್ನೆಲೆ ಅಮೆರಿಕದ ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್ ನಗರವು ಏಪ್ರಿಲ್ 25ರ ದಿನವನ್ನು “ರಾಜೇಶ್ ಕೃಷ್ಣನ್ ಸಂಗೀತ ದಿನ” ಎಂದು ಘೋಷಿಸಿದೆ.

ರಾಜೇಶ್ ಕೃಷ್ಣನ್ ಅವರು ಸರಿಗಮಪ ರಿಯಾಲಿಟಿ ಶೋ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಅಂದಹಾಗೆ ಅವರ ಗಾಯನಕ್ಕೆ ಸಾಕಷ್ಟು ಮಂದಿ ತಲೆದೂಗುತ್ತಾರೆ. ಇದೀಗ ಅವರ ಧ್ವನಿಗೆ ಮತ್ತೊಂದು ಕಿರೀಟ ಎಂಬಂತೆ ಯುನೈಟೆಡ್ ಸ್ಟೇಟ್ಟ್‌ನ ಬ್ರೂಕ್‌ಫೀಲ್ಡ್‌ನ ಅತ್ಯುನ್ನತ್ತ ಗೌರವಕ್ಕೆ ಭಾಜನರಾಗಿದ್ದಾರೆ. ಇತ್ತೀಚೆಗಷ್ಟೇ ಯುನೈಟೆಡ್ ಸ್ಟೇಟ್ಸ್‌ನ ಬ್ರೂಕ್‌ಫೀಲ್ಡ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭಾಗಿಯಾಗಿ ತಮ್ಮ ಹಾಡುಗಳ ಮೂಲಕ ಜನರನ್ನು ಮನರಂಜಿಸಿದ್ದರು. ಏಪ್ರಿಲ್‌ 25 ರಂದು ಇಡೀ ದಿನ ತಮ್ಮ ಕಾರ್ಯಕ್ರಮದ ಮೂಲಕ ಸಂಗೀತ ಲೋಕ ಸೃಷ್ಟಿಸಿದ್ದ ಕೃಷ್ಣನ್‌ ಅವರಿಗೆ ಬ್ರೂಕ್‌ಫೀಲ್ಡ್‌ ಮೇಯರ್‌ ಸ್ಟೀವನ್ ವಿ. ಪಾಂಟೊ ಅವರು ಅತ್ಯುನ್ನತ್ತ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಏಪ್ರಿಲ್‌ 25ರಂದು ಇಡೀ ದಿನ ಕೃಷ್ಣನ್ ಅವರ ಸಂಗೀತ ಸೇವೆಯನ್ನ ಗುರುತಿಸಿ ಗೌರವರ್ಥವಾಗಿ ಈ ದಿನವನ್ನು ರಾಜೇಶ್‌ ಕೃಷ್ಣನ್‌ ಮ್ಯೂಸಿಕಲ್‌ ಡೇ ಎಂದು ಬ್ರೂಕ್‌ಫೀಲ್ಡ್‌ ಮೇಯರ್‌ ಘೋಷಿಸಿದ್ದಾರೆ. ರಾಜೇಶ್ ಕೃಷ್ಣನ್ ಅವರು ಭಾರತ ಮತ್ತು ಅಮೇರಿಕಾ ನಡುವೆ ಶ್ರೀಮಂತ ಸಂಗೀತ ವಿನಿಮಯವನ್ನು ಉತ್ತೇಜಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಕೃಷ್ಣನ್ ಮಾಹಿತಿ ನೀಡಿದ್ದಾರೆ. ಮೇಯರ್ ಸ್ಟೀವನ್ ವಿ.ಪಾಂಟೊ ಅವರೊಂದಿನ ಹಾಗೂ ಪ್ರಶಸ್ತಿ ಪತ್ರದ ಚಿತ್ರಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಕೃಷ್ಣನ್ ಅವರು ಮೆಲೋಡಿ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಸದಾ ಹಸನ್ಮುಖಿಯಾಗಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಅವರು, ತಮ್ಮ ಹಾಡುಗಳ ಮೂಲಕವೇ ಗಮನಸೆಳೆಯುತ್ತಾರೆ. ಇದರೊಂದಿಗೆ ಅವರು ಭಕ್ತಿ ಗೀತೆಗಳು ಸೇರಿದಂತೆ ವಿಭಿನ್ನ ಹಾಡುಗಳಿಗೂ ಕಂಠ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೇ ಹಿಂದಿ ಸೇರಿದಂತೆ ಸುಮಾರು ಸಾವಿರಾರು ಹಾಡುಗಳಿಗೆ ಧ್ವನಿಗೂಡಿಸಿರುವ ಕೃಷ್ಣನ್, ಬಹುಮುಖ ಪ್ರತಿಭೆಯಾಗಿದ್ದಾರೆ. ಹೀಗಾಗಿಯೇ ಅವರು ಸರಿಗಮಪ ರಿಯಾಲಿಟಿ ಶೋನ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ರಾಜೇಶ್ ಅವರಿಗೆ ಕರ್ನಾಟಕ ರಾಜ್ಯದಿಂದ ಕರ್ನಾಟಕ ಸ್ಟೇಟ್ ಫಿಲಂ ಫೇರ್ ಅವಾರ್ಡ್, ಅತ್ಯುತ್ತಮ್ಮ ಹಿನ್ನಲೆ ಗಾಯಕ’ ಪ್ರಶಸ್ತಿ, ಸುವರ್ಣ ಫಿಲಂ ಫೇರ್ ಅವಾರ್ಡ್, ಉದಯ ಫಿಲಂ ಫೇರ್ ಅವಾರ್ಡ್, ನಂದಿ ಫಿಲಂ ಫೇರ್ ಅವಾರ್ಡ್‌ನಂತಹ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. ಭಾರತೀಯ ಸಂಗೀತಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿರುವ ಅವರು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ ಚಿತ್ರದಲ್ಲಿ ಪ್ರಮುಖ ನಟರಾಗಿಯೂ ಅಭಿನಯಿಸಿದ್ದಾರೆ.

ಮೈಸೂರು ದಸರಾ, ಹಂಪಿ ಉತ್ಸ‌ವ ಸೇರಿದಂತೆ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಜನರನ್ನು ಮನರಂಜಿಸುವ ಅವರು ಕಿಚ್ಚ ಸುದೀಪ್‌ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷದ ಪೂರೈಸಿದ ಸಂದರ್ಭದಲ್ಲೂ ರಾಜೇಶ್‌ ಕೃಷ್ಣನ್‌ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗಿದ್ದವು.

Leave a Reply

Your email address will not be published. Required fields are marked *

× How can I help you?