ಕೆ.ಆರ್.ಪೇಟೆ – ನ್ಯಾಯಮೂರ್ತಿಗಳಾದ ಎ.ಜೆ.ಸದಾಶಿವ ಆಯೋಗ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಅಗತ್ಯವಿದೆ ಎಂದು ವರದಿ ನೀಡಿದ ಪರಿಣಾಮ ಸರ್ಕಾರವು ಪರಶಿಷ್ಟ ಜಾತಿಗಳ ಸಮೀಕ್ಷೆ ಮತ್ತು ಗಣತಿ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ನಡೆಸುತ್ತಿರುವುದು ಅತ್ಯಂತ ಸಂತೋಷದಾಯಕ ವಿಚಾರವಾಗಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊಸಹೊಳಲು ಪಟ್ಟಣದ ಡಾ.ಬಾಬು ಜಗಜೀವನರಾಂನಗರದಲ್ಲಿ ಗಣತಿ ಮಾಡಲು ಆಗಮಿಸಿ ಶಿಕ್ಷಕರನ್ನು ಹೂಮಳೆ ಸುರಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಗಣತಿ ಮತ್ತು ದತ್ತಾಂಶ ಸಂಗ್ರಹ ಕಾರ್ಯಕ್ರಮಕ್ಕೆ ಬಡಾವಣೆಯ ನಿವಾಸಿಗಳು ಉತ್ಸಾಹದಿಂದ ಚಾಲನೆ ನೀಡಿದರು.

ಸಮಾಜ ಸೇವಕರಾದ ನಂಜುಂಡಸ್ವಾಮಿ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಹೆಚ್.ಪುಟ್ಟರಾಜು ನೇತೃತ್ವದಲ್ಲಿ ಹೊಸಹೊಳಲು ಪಟ್ಟಣದ ಪುರಸಭಾ ವಾರ್ಡ್ ಸಂಖ್ಯೆ 18, 19, 20ರಲ್ಲಿರುವ ದಲಿತ ಬಂಧುಗಳ ಮನೆ ಮನೆ ಸಮೀಕ್ಷೆ ನಡೆಸಿ ಗಣತಿ ಮತ್ತು ದತ್ತಾಂಶ ಸಂಗ್ರಹ ಕಾರ್ಯಕ್ಕ ನಿಯೋಜಿತರಾಗಿರುವ ಶಿಕ್ಷಕರಾದ ಸತೀಶ್‌ಚಂದ್ರು ಹಾಗೂ ರವಿ ಅವರನ್ನು ಹೂಮಳೆ ಸುರಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸುವ ಮೂಲಕ ತಮ್ಮ ಬಡಾವಣೆಯಲ್ಲಿ ಮನೆ ಮನೆ ಸಮೀಕ್ಷೆಗೆ ವಾರ್ಡಿನ ನಿವಾಸಿಗಳು ಚಾಲನೆ ನೀಡಿದರು.

ಸಮಾಜ ಸೇವಕರು ಹಾಗೂ ದಾನಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಮಾತನಾಡಿ ಪ್ರತಿಯೊಬ್ಬ ದಲಿತ ಬಂಧುಗಳು ಗಣತಿದಾರರಿಗೆ ಅಗತ್ಯ ಮಾಹಿತಿ ಒದಗಿಸಬೇಕು. ಅಲ್ಲದೇ ಗಣತಿ ಕಾರ್ಯವು ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯವಾಗಿದೆ. ಕಳೆದ 30ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಒಂದೇ ಸಮುದಾಯವು ಹೆಚ್ಚು ಅವಕಾಶವನ್ನು ಪಡೆದು ಅಭಿವೃದ್ಧಿ ಸಾಧಿಸಿದೆ. ಆದರೆ ಮಾದಿಗ ಸಮುದಾಯವು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಸಹ ಮೀಸಲಾತಿಯನ್ನು ನಿರೀಕ್ಷಿತ ಪ್ರಮಾಣದಲ್ಲಿ ಪಡೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾರಣ, ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣವಾಗಿದೆ.

ಹಾಗಾಗಿ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ನಮ್ಮ ಮಾದಿಗ ಸಮುದಾಯದ ಹಿರಿಯರು ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರ ಪ್ರತಿಫಲವಾಗಿ ಸರ್ಕಾರಗಳು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚನೆ, ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿ ಮಾದಿಗ ಸಮುದಾಯಕ್ಕೆ ಹಾಗೂ ಮಾದಿಗ ಸಮಾನಾಂತರ ಉಪ ಜಾತಿಗಳಿಗೆ ಪರಿಶಿಷ್ಟ ಜಾತಿಯ ಮೀಸಲಾತಿಯ ಶೇ. 15%ರ ಪೈಕಿ ಶೇ. 6% ರಷ್ಟು ಒಳಮೀಸಲಾತಿ ನಿಗದಿ ಪಡಿಸಿ ಜಾರಿಗೆ ತರುವಂತೆ ವರದಿ ನೀಡಿವೆ.

ಈ ನಡುವೆ ರಾಜ್ಯ ಸರ್ಕಾರಗಳು ಒಳಮೀಸಲಾತಿ ತರಲು ಮೀನಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:01-08-2024 ರಂದು ತೀರ್ಪು ನೀಡಿ, ಪರಿಶಿಷ್ಟ ಜಾತಿಯವರಿಗೆ ನೀಡುವ ಒಳಮೀಸಲಾತಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗುವುದಿಲ್ಲ ಹಾಗೂ ಭಾರತೀಯ ಸಂವಿಧಾನದ ಆರ್ಟಿಕಲ್ 341 ರ ಉಲ್ಲಂಘನೆ ಆಗುವುದಿಲ್ಲ ಎಂದು ತೀರ್ಪು ನೀಡಿರುತ್ತದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಮಾದಿಗ ಸಮುದಾಯವು ಶೈಕ್ಷಣಿಕವಾಗಿ, ಸರ್ಕಾರಿ ಉದ್ಯೋಗಪಡೆದುಕೊಳ್ಳುವಲ್ಲಿ, ವಂಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪಿನ ಪ್ರಕಾರ ಮಾದಿಗ ಸಮುದಾಯಕ್ಕೆ ಶೇ. 6% ರಷ್ಟು ನೀಡಲು ರಾಜ್ಯ ಸರ್ಕಾರವು ಪರಿಶಿಷ್ಟರ ಜಾತಿ ಗಣತಿಯನ್ನು ಮೇ.17ವರೆಗೆ ಮನೆ ಮನೆ ಸಮೀಕ್ಷೆ, ಮೇ.19ರಿಂದ 21ವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ, ಮೇ.23ವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮೂಲಕ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಣೆ ಮಾಡುತ್ತಿದೆ. ಹಾಗಾಗಿ ನಮ್ಮ ಮಾದಿಗ ಸಮುದಾಯ ಬಂಧುಗಳು ಕಡ್ಡಾಯವಾಗಿ ಜಾತಿ ಗಣತಿಯಲ್ಲಿ ಮಾದಿಗ ಎಂದು ಬರೆಸುವ ಮೂಲಕ ತಮ್ಮ ಮಕ್ಕಳ ಭವಿಷ್ಯಕ್ಕೆ ಅವಕಾಶ ಒದಗಿಸಿಕೊಡಬೇಕು ಎಂದು ಸಮಾಜ ಸೇವಕರು ಹಾಗೂ ದಾನಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಸಮುದಾಯದ ಬಂಧುಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಪುಟ್ಟರಾಜು, ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಖಜಾಂಚಿ ಸುರೇಶ್ ಹರಿಜನ, ಮುಖಂಡರಾದ ಹರೀಶ್, ಬೆಟ್ಟಪ್ಪ, ಸಿ.ಆರ್.ಪಿ.ಪ್ರಶಾಂತ್, ಸುಕುಮಾರಸ್ವಾಮಿ, ಮಂಜು, ವಿಷಕಂಠ, ಸ್ವಾಮಿ, ಸೇರಿದಂತೆ ಹಲವು ಮುಖಂಡರು, ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.