ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಪಾಠ ಪ್ರವಚನದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಸನಗೊಳಿಸಿ ಕೊಂಡು ಸಾಧನೆ ಮಾಡಬೇಕೆಂದು ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಕೃಷ್ಣರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕಿನ ಪದವಿ ಪೂರ್ವ ಹಾಗೂ ಅಂತರ ಕಾಲೇಜುಗಳ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಟಿವಿ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿಯಿಂದ ಮತ್ತು ಮೊಬೈಲ್ ಫೋನಿನ ಮೋಹದಿಂದಾಗಿ ಯುವಜನರು ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಬಂಧುಗಳೊಂದಿಗೆ ಮುಕ್ತವಾಗಿ ಬೆರೆಯದೇ ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿ ತಮ್ಮದೇ ಪ್ರಪಂಚದಲ್ಲಿ ವಿಹಾರ ಮಾಡುತ್ತಾ ಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಮ್ಮನ್ನು ಸದಾ ಕಾಲ ಕ್ರಿಯಾಶೀಲವಾಗಿಟ್ಟು ಹೊಸತನವನ್ನು ತುಂಬಿ ನಮ್ಮಲ್ಲಿ ಲವಲವಿಕೆ ಮತ್ತು ಹೊಸತನವನ್ನು ತುಂಬುವ ಜಾನಪದ ಗೀತೆ ಗಾಯನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಬೇಕು. ಯುವಕರು ಮೊಬೈಲ್ ಪ್ರಪಂಚದಿಂದ ಹೊರಬಂದು, ಚಿಂತೆಗಳನ್ನು ಮರೆತು ಎಲ್ಲರೊಂದಿಗೆ ಸಂತೋಷದಿಂದ ಬೆರೆತು ನಗು ನಗುತ್ತಾ ಜೀವನ ನಡೆಸಲು ಮುಂದಾಗಬೇಕು ಎಂದು ಮಲ್ಲಿಕಾರ್ಜುನ ಕಿವಿ ಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗವು ನಿರ್ಣಾಯಕ ಘಟ್ಟವಾಗಿರುವುದರಿಂದ ಮುಂದೆ ನಾವು ಯಾವ ಕೋರ್ಸಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡಬೇಕೆಂಬ ಚಿಂತೆಯನ್ನು ಹೋಗಲಾಡಿಸಿ ಮಾರ್ಗದರ್ಶನ ನೀಡುವ ಜೊತೆಗೆ ರಾಜ್ಯ ಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ ಮುಂದಿನ ವಿದ್ಯಾಭ್ಯಾಸದ ದಾರಿಯು ಸುಗಮವಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಿದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಜಯಕೀರ್ತಿ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಕಾಲೇಜಿನ ಹಿರಿಯ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಸೇರಿದಂತೆ ಕಾಲೇಜಿನ ಸಹ ಪ್ರಾಧ್ಯಾಪಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೆ.ಆರ್.ಪೇಟೆ