ಸರಗೂರು:ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಕೆಂಚನಹಳ್ಳಿ ಹಾಗೂ ಟೈಟಾನ್ ಸಂಸ್ಥೆ ವತಿಯಿoದ ದ್ವಿಚಕ್ರ ವಾಹನಗಳ ದುರಸ್ತಿ ತರಬೇತಿ ಪಡೆದ 10 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಕೆ. ನಾರಾಯಣಮೂರ್ತಿ ಯವರು ಭಾಗವಹಿಸಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
ತರುವಾಯ ತರಬೇತಿ ಪಡೆದ ಅಭ್ಯರ್ಥಿಗಳ ಉದ್ದೇಶಿಸಿ ಮಾತನಾಡಿದ ಅವರು,ಮನುಷ್ಯನ ಜೀವನವು ಕೌಶಲ್ಯದಿಂದ ಕೂಡಿರಬೇಕಾದರೆ ತರಬೇತಿಗಳು ಬಹಳ ಮುಖ್ಯ. ಈ ರೀತಿಯ ತರಬೇತಿಗಳನ್ನು ಯುವ ಸಮುದಾಯ ಬಳಸಿಕೊಂಡು ಸ್ವ ಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವ ಜೊತೆಗೆ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಹೆಚ್.ಡಿ.ಕೋಟೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವರಂಜನ್ ಮಾತನಾಡಿ,ದೇಶದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸುವ ಏಕೈಕ ಅಸ್ತ್ರ ಎಂದರೆ ಅದು ಸ್ವಯಂ ಉದ್ಯೋಗ.ಯುವ ಪೀಳಿಗೆ ಸ್ವಾವಲಂಬಿತವಾದ ಜೀವನ ನಡೆಸಲು ಬೇಕಾದಂತಹ ಕೌಶಲ್ಯಯುತವಾದ ತರಬೇತಿಯನ್ನು ನೀಡುವ ಮೂಲಕ ಮಾತ್ರ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿ.ಡಿ ನಾಯಕ್ ರವರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಗ್ರಾಮೀಣ ಸಮುದಾಯದಲ್ಲಿ ಯುವಕರಿಗೆ ಸ್ವ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದೆ.ಇಂದು ತರಬೇತಿಯ ಪ್ರಮಾಣಪತ್ರಗಳನ್ನು ಪಡೆದಿರುವ ನೀವುಗಳು ಸ್ವಯಂ ಉದ್ಯೋಗವನ್ನು ಪ್ರಾರಂಭಿಸುವ ಮೂಲಕ ನಿಮ್ಮ ಹಾಗೆ ಇನ್ನು ಹತ್ತಾರು ಯುವಕರಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ ಡಿ ಕೋಟೆ ಜೆ.ಕೆ ಮೋಟರ್ ಮಾಲೀಕರಾದ ಜಯರಾಂ,ಕೆಂಚನಹಳ್ಳಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕರಾದ ರವಿಕುಮಾರ್ ಹಾಗೂ ವಿವೇಕ ಜೀವನಾಧಾರ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
—-———-ಶಿವು ಕೋಟೆ