ಶ್ರವಣಬೆಳಗೊಳ: ಜಗತ್ತು ಅಹಿಂಸಾ ಮಾರ್ಗದಲ್ಲಿ ಸಾಗಬೇಕು. ಹಿಂಸೆಯನ್ನು ತ್ಯಜಿಸಬೇಕು. ಶಾಂತಿ ಸೌಹಾರ್ದಯುತ ಜಗತ್ತು ನಿರ್ಮಾಣಕ್ಕೆ ಭಗವಾನ್ ಮಹಾವೀರರ ತತ್ವ ಆದರ್ಶಗಳು ಅಗತ್ಯವಾಗಿವೆ. ಅಹಿಂಸಾ ತತ್ವದಿಂದ ಇಡೀ ಪ್ರಪಂಚದಲ್ಲಿ ನೆಮ್ಮದಿಯ ವಾತಾವರಣವನ್ನು ಕಾಣಬಹುದಾಗಿದೆ. ಇಂತಹ ಶ್ರೇಷ್ಠ ಅಹಿಂಸಾ ತತ್ವವನ್ನು ಸಾರುವ ಜೈನ ಧರ್ಮದ ಸಂರಕ್ಷಣೆ ಅಗತ್ಯವಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ವಿಶ್ವವಿಖ್ಯಾತ ಶ್ರವಣಬೆಳಗೊಳ ಶ್ರೀ ಕ್ಷೇತ್ರದ ಜೈನಮಠದ ಆವರಣದಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರರ 2624 ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಭಗವಾನ್ ಮಹಾವೀರರು 24ನೇ ತೀರ್ಥಂಕರರಾಗಿದ್ದ ಜೈನಧರ್ಮದ ರಥವನ್ನು ಉತ್ತಮವಾಗಿ ಎಳೆದು ಜೈನ ಧರ್ಮವನ್ನು ಸಮೃದ್ದವಾಗಿ ಅಭಿವೃದ್ಧಿ ಗೊಳಿಸಿ, ಅನೇಕ ದೇಶಗಳಿಗೆ ಹರಡಲು ಕಾರಣಕರ್ತರಾದರು. ಭೂಮಿಯ ಸಕಲ ಜೀವಿಗಳನ್ನು ಸಮಾನವಾಗಿ ಕಾಣುವ ಏಕೈಕ ಧರ್ಮ ನಮ್ಮ ಜೈನ ಧರ್ಮವಾಗಿದೆ. ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದು ಈ ಪೈಕಿ ಜೈನ ಧರ್ಮವು ಎಲ್ಲಾ ಧರ್ಮಕ್ಕಿಂತ ಅತ್ಯಂತ ಪ್ರಾಚೀನ ಧರ್ಮವಾಗಿದೆ. ಜೈನ ಧರ್ಮದ ಸ್ಥಾಪಕರು ಉಲ್ಲೇಖಿಸಿರುವ ಜೈನ ಧರ್ಮದ ಮೂಲ ತತ್ವವೇ ಅಹಿಂಸೆ. ಜೈನ ಧರ್ಮದ ಬೋಧನೆಗಳ ಪ್ರಕಾರ, ಮಾನವರು, ಕೀಟಗಳು, ಪ್ರಾಣಿಗಳು, ಸಸ್ಯಗಳು, ಬಂಡೆಗಳು ಇತ್ಯಾದಿ ಸೇರಿದಂತೆ ಎಲ್ಲಾ ಜೀವಿಗಳು ಸಮಾನ ಜೀವನವನ್ನು ಹೊಂದಿವೆ.
ಜೈನ ಧರ್ಮವು ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ದ್ವೇಷಿಸದ ಹಾಗೂ ಪ್ರಾಣ ಹಾನಿ ಮಾಡದ ಮತ್ತು ನೋಯಿಸದ ತತ್ವವನ್ನು ಹೊಂದಿದೆ. ಸದಾ ಸತ್ಯವನ್ನು ನುಡಿಯುವುದು. ಯಾರಿಗೂ ನೋವುಂಟು ಮಾಡದಿರುವುದು. ಕಳ್ಳತನ ಮಾಡದೇ ಇರುವುದು. ನನ್ನದು ಮತ್ತು ನಾನು ಎಂಬ ಭಾವನೆಯನ್ನು ತೊಡೆದುಹಾಕುವುದು. ಆಧ್ಯಾತ್ಮಿಕ ಚಿಂತನೆಯನ್ನು ರೂಢಿಸಿಕೊಳ್ಳುವುದು. ದಾನ-ಧರ್ಮದ ಗುಣಗಳನ್ನು ಬೆಳೆಸಿಕೊಳ್ಳುವುದು. ಮನಸ್ಸನ್ನು ಸದಾ ಶುದ್ದವಾಗಿಟ್ಟುಕೊಳ್ಳವುದು ಜೈನ ಧರ್ಮ ಮೂಲ ತತ್ವಗಳಾಗಿವೆ. ಈ ತತ್ವಗಳಿಂದ ಉತ್ತಮ ಸಮಾಜ ನಿರ್ಮಿಸುವ ಜೊತೆಗೆ ಶ್ರೇಷ್ಠ ಭಾರತ ಮತ್ತು ಶಾಂತಿ-ಸೌಹಾರ್ದಯುತ ಪ್ರಪಂಚವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಶ್ರವಣಬೆಳಗೊಳ ಶ್ರೀ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಪಂಡಿತಾರಾಧ್ಯ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದರು. ಬಳಿಕ ಮಾತನಾಡಿದ ಶ್ರೀಗಳು ಸರ್ವೇ ಜನೋ ಸುಖಿನೋ ಭವಂತು ಎಂಬು ನಾಣ್ಣುಡಿ ಜೈನ ಧರ್ಮಕ್ಕೆ ಅನ್ವಯವಾಗುತ್ತದೆ. ಧರ್ಮಗಳು ಬೇರೆ ಬೇರೇಯಾದರೂ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿರುತ್ತದೆ ಅದು ಮೋಕ್ಷ ಪಡೆಯುವ ಉದ್ದೇಶವನ್ನು ಹೊಂದಿವೆ. ಆದರೆ ಧರ್ಮದ ಆಚರಣೆ ಮಾಡುವ ಜನರ ಮನಸ್ಥಿತಿಯಿಂದ ಅನೇಕ ಕಂದಕಗಳು ಸೃಷ್ಠಿಯಾಗುತ್ತವೆ.
ಈ ಕಂದಕವನ್ನು ಸರಿಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಠ, ಮಾನ್ಯಗಳು, ಶಾಲಾ-ಕಾಲೇಜುಗಳು, ಗುರು ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಹಿಂದೆ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ಮಹನೀಯ ಜಯಂತಿಯ ದಿನದಂದು ಅವರನ್ನು ಸ್ಮರಿಸಿ ಅವರು ನಡೆದು ಬಂದ ದಾರಿಯನ್ನು ತಿಳಿದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ, ಶಾಂತಿಯುತ ಜಗತ್ತಿನ ನಿರ್ಮಾಣಕ್ಕೆ ಜೈನ ಧರ್ಮ ಹಾಗೂ ಭಗವಾನ್ ಮಹಾವೀರರ ತತ್ವ ಆದರ್ಶ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮೆನ, ಹಾಸನ ಸಂಸದ ಶ್ರೇಯಸ್ ಪಟೇಲ್, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಶ್ರವಣಬೆಳಗೊಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಖ್ತರ್ ಪಾಷಾ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯತ್ ಸಿಇಓ ಬೆ.ರಾ.ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.