ಶ್ರವಣಬೆಳಗೊಳ-ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ನೇತೃತ್ವದಲ್ಲಿ ನಡೆದ ವೃಷಭನಾಥ ಜಿನ ಬಸದಿಯ ಶಿಲಾನ್ಯಾಸ ಕಾರ್ಯಕ್ರಮ

ಶ್ರವಣಬೆಳಗೊಳ-ಸಾವಿರಾರು ವರ್ಷಗಳ ಹಿಂದೆ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಮತ್ತು ಆಚಾರ್ಯ ಭದ್ರಬಾಹು ಮುನಿಗಳ ಆಗಮನದಿಂದಾಗಿ ಶ್ರವಣಬೆಳಗೊಳದ ಚಂದ್ರಗಿರಿ ವಿಂಧ್ಯಗಿರಿ ಬೆಟ್ಟಗಳ ಪ್ರಶಾಂತ ಪ್ರದೇಶವು ತ್ಯಾಗಿಗಳ ಶ್ರಾವಕರ ಸಲ್ಲೇಖನ ಸಮಾಧಿ ಮರಣಕ್ಕೆ ಪ್ರಸಿದ್ಧಿಯಾಗಿತ್ತು ಎಂದು ಜೈನ ಮಠದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಬುಧವಾರ ಹೇಳಿದರು.

ಹೋಬಳಿಯ ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಣೇನಹಳ್ಳಿಯಲ್ಲಿ ರಾಜ್ಯ ಪುರಾತತ್ವ ಇಲಾಖೆ ಮತ್ತು ಕ್ಷೇತ್ರದ ಎಸ್ ಡಿ ಜೆ ಎಂ ಐ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ವೃಷಭನಾಥ ಜಿನ ಬಸದಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಉತ್ತರದಿಂದ ಶ್ರವಣಬೆಳಗೊಳಕ್ಕೆ 12 ಸಾವಿರ ಮುನಿಗಳು ಆಗಮಿಸಿದ್ದಾಗ ಸಾಣೇನಹಳ್ಳಿ ಜಿನನಾಥಪುರ, ಮತ್ತು ಹಳೇ ಬೆಳಗೊಳದ ಗ್ರಾಮಗಳು ತ್ಯಾಗಿಗಳ ಆಹಾರಕ್ಕಾಗಿ ಜೈನ ಶ್ರಾವಕರೊಂದಿಗೆ ಸಮೃದ್ಧಗೊಂಡಿದ್ದವು ಎಂದು ಹೇಳಿದರು. ಈ ಪ್ರಾಚೀನ ಜಿನ ಬಸದಿಯನ್ನು ಹೊಯ್ಸಳರ ಸೇನಾಧಿಪತಿ ಗಂಗರಾಜರ ಅತ್ತಿಗೆ ಜಕ್ಕವ್ವೆಯು ಆಚಾರ್ಯ ಶುಭಚಂದ್ರರ ಮಾರ್ಗದರ್ಶನದಲ್ಲಿ ಕ್ರಿ.ಶ.1120 ನೇ ಇಸವಿಯಲ್ಲಿ ನಿರ್ಮಾಣ ಮಾಡಿಸಿದ್ದ ಇತಿಹಾಸದ ಬಸದಿಯಾಗಿದ್ದು, ಕಾಲ ಕ್ರಮೇಣ ಇಲ್ಲಿ ಜೈನರ ಸಂಖ್ಯೆ ಕಡಿಮೆಯಾಗಿ ನಿರ್ವಹಣೆ ಇಲ್ಲದೇ 9 ಗುಂಟೆ ಪ್ರದೇಶವು ಕಾಡಿನಂತೆ ಬೆಳೆದು ಪಾಳು ಬೀಳುವಂತಾಗಿತ್ತು ಎಂದು ವಿಷಾಧಿಸಿದರು.

ಈ ಗ್ರಾಮ ಜನಗಳ ಅಪೇಕ್ಷೆ ಮತ್ತು ಚಾರುಕೀರ್ತಿ ಶ್ರೀಗಳ ಸಂಕಲ್ಪದಂತೆ ರಾಜ್ಯ ಪುರಾತತ್ವ ಇಲಾಖೆಯು 25 ಅಡಿ ಅಗಲ 30 ಅಡಿ ಉದ್ದದಲ್ಲಿ ಸಂಪೂರ್ಣ ಶಿಥಿಲಗೊಂಡಿದ್ದ ಜನ ಬಸದಿಯ ಪುನರ್ ನಿರ್ಮಾಣ ಮಾಡಲು 25 ಲಕ್ಷ ಮಂಜೂರಾತಿ ಮಾಡಿದ್ದು, ಬಸದಿಯ ಉಳಿಕೆಯ ಕಾಮಗಾರಿಗಳಾದ ಮಾನಸ್ತಂಭ, ಮುಖಮಂಟಪ, ಕಲ್ಲಿನ ಕಾಂಪೌಂಡ್, ನೆಲಹಾಸು, ಇತ್ಯಾದಿ ಕೆಲಸಗಳಿಗೆ ಜೈನ ಮಠದ ಟ್ರಸ್ಟ್ ಆರ್ಥಿಕ ನೆರವು ಬರಿಸಲಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಎಸ್.ಡಿ.ನಂದಕುಮಾರ್ ಶಾಸ್ತ್ರಿಗಳ ನೇತೃತ್ವದಲ್ಲಿ ಮಂಗಲ ಕಲಶಗಳಿಂದ ಪೂಜೆ ನೆರವೇರಿಸಲಾಯಿತು. ನಂತರ ಅಭಿನವ ಶ್ರಿಗಳು ಗಂಧೋದಕ, ನವರತ್ನ, ಬಿಳಿ ಎಳ್ಳು, ಲವಂಗಗಳನ್ನು ಅಡಿಪಾಯಕ್ಕೆ ಅರ್ಪಿಸುತ್ತಿದ್ದಂತೆ ಮಂಗಳ ವಾಧ್ಯ ಜಯಗಂಟೆ ಮೊಳಗಿದವು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯರುಗಳಾದ, ಎಸ್.ಬಿ.ಯಶಸ್, ಸುಮಿತ್ರ, ಪುರಾತತ್ವ ಇಲಾಖೆಯ ಗುತ್ತಿಗೆದಾರ ಸೋಮಸುಂದರ್, ಟ್ರಸ್ಟ್ ಸದಸ್ಯರುಗಳಾದ ಎಚ್.ಪಿ.ಅಶೋಕ್ ಕುಮಾರ್, ಸಂಜು, ಎಸ್.ವಿ.ಭರತೇಶ್, ಹೇಮಂತ್, ಕೂಷ್ಮಾಂಡಿನಿ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ಪುಷ್ಪ, ಜೈನ ಸಮಾಜದ ಕಾರ್ಯದರ್ಶಿ ಎಸ್.ಬಿ.ಬಾನು ಕುಮಾರ್, ಮುಖಂಡರುಗಳಾದ ನಿಹಾಲ್ ಚಂದ್ ಜೈನ್, ಚೇತನ್ ಷಾ, ಪುನೀತ್, ಮಧುಕುಮಾರ್, ಎಸ್.ಪಿ.ನವೀನ್ ಕುಮಾರ್, ವೈರಮುಡಿ ಗೌಡ, ಚಲುವೇಗೌಡ, ಸತೀಶ್, ನಂಜಪ್ಪ, ಸಾಯಿ ಸತೀಶ್, ರವಿ, ಎಸ್.ಪಿ.ಮಹೇಶ್, ಬೇಗೂರು ವೀರೇಂದ್ರ ಕುಮಾರ್, ಸುರೇಶ್ ಕುಮಾರ್, ಇಂಜಿನೀಯರ್ ಭರತೇಶ್ ಹನುಮಗೌಡ, ಜಿ.ಡಿ.ಪಾರ್ಶ್ವನಾಥ್, ಮಹಿಳಾ ಸಮಾಜದ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

× How can I help you?