ನಾಗಮಂಗಲ-ಶ್ರೀ ಆದಿಚುಂಚನಗಿರಿ ಕ್ಷೇತ್ರ-ಸಚಿವ ಎನ್‌.ಎಸ್‌ ಭೋಸರಾಜು ಭೇಟಿ-ತಾರಾಲಯಕ್ಕೆ ಅನುದಾನ ನೀಡುವ ಭರವಸೆ

ನಾಗಮಂಗಲ-: ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣಗೊಳಿಸುವ ಹಾಗೂ ತಾರಾಲಯ ನಿರ್ಮಾಣಕ್ಕೆ ಸರಕಾರದ ವತಿಯಿಂದ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ನೀಡಿದರು.

ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಿದರು.

2018-19 ನೇ ಸಾಲಿನಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಸುಮಾರು 7 ಕೋಟಿ ರೂಪಾಯಿಗಳ ಅನುದಾನ ಕೂಡಾ ಮೀಸಲಿಡಲಾಗಿದೆ.ಈ ಕೇಂದ್ರದ ಕಟ್ಟಡವನ್ನು ಇನ್ಫಿನಿಟಿ ಆಕಾರದಲ್ಲಿ ನಿರ್ಮಿಸಲಾಗುತ್ತಿದೆ.ಪ್ರಸ್ತುತ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದೆ.ಕಾಮಗಾರಿಯ ವೇಗವನ್ನು ಹೆಚ್ಚಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ,ಶ್ರೀ ಕ್ಷೇತ್ರದಲ್ಲಿ ತಾರಾಲಯ ನಿರ್ಮಾಣದ ಬಗ್ಗೆಯೂ ಪ್ರಸ್ತಾಪಿಸಲಾಯಿತು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.ಪ್ರಸ್ತಾವನೆ ಸಲ್ಲಿಕೆಯ ನಂತರ ಇಲಾಖೆಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷನೆ ನಡೆಸಿದ ಸಚಿವರು ಶ್ರೀ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಉಪ ವಿಜ್ಞಾನ ಕೇಂದ್ರದ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿದರು.ಸರಕಾರದ ವತಿಯಿಂದ ಅಗತ್ಯ ಸಹಕಾರ ದೊರೆಯಲಿದೆ ಎಂದು ಸಚಿವರು ಸ್ವಾಮೀಜಿಗಳಿಗೆ ತಿಳಿಸಿದರು.

ಮಠಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿಗಳಿಂದ ಸಚಿವರು ಆಶೀರ್ವಾದ ಸ್ವೀಕರಿಸಿದರು.

——-ರವಿ ಬಿ.ಹೆಚ್

Leave a Reply

Your email address will not be published. Required fields are marked *

× How can I help you?