ಮೂಡಿಗೆರೆ:ಹಳೇಮೂಡಿಗೆರೆ ಗ್ರಾಮದ ಸುಮಿತ್ರಾ ಎಂಬುವವರ 3 ತಿಂಗಳ ಮಗುವಿನ ತಲೆಯಲ್ಲಿ ನೀರು ತುಂಬಿದ್ದು, ನೀರನ್ನು ಹೊರತೆಗೆಯಲು 2 ವಾರಕ್ಕೊಮ್ಮೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ. ಇದರಿಂದ ಕಡುಬಡವರಾದ ಅವರಿಗೆ ಆಸ್ಪತ್ರೆಯ ಖರ್ಚು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಮಗುವಿನ ಆಸ್ಪತ್ರೆ ಖರ್ಚು ಭರಿಸಲು ಸಾಧ್ಯವಾಗದ ಕಾರಣ ಆರ್ಥಿಕ ಸಹಾಯಕ್ಕಾಗಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಗೆ ಮನವಿ ಸಲ್ಲಿಸಿದ್ದರು.
ಅವರ ಮನವಿಯನ್ನು ಪರಿಗಣಿಸಿದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ ಅವರು ಮಗುವಿನ ಚಿಕಿತ್ಸೆಗೆ ಧನಸಹಾಯ ಮಂಜೂರು ಮಾಡಿದ್ದಾರೆ. ಆ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಅಧಿಕಾರಿಗಳು ಭಾನುವಾರ ಸುಮಿತ್ರಾ ಅವರ ಮನೆಗೆ ತೆರಳಿ ನೀಡಿದ್ದಾರೆ.
ಈ ವೇಳೆ ಧರ್ಮಸ್ಥಳ ಶೌರ್ಯ ಮತ್ತು ವಿಪತ್ತು ತಂಡದ ಮಾಸ್ಟರ್ ಪ್ರವೀಣ್ ಪೂಜಾರಿ ಮಾತನಾಡಿ, ಕಡು ಬಡತನದಲ್ಲಿರುವ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಧರ್ಮಸ್ಥಳ ಧರ್ಮಾಧಿಕಾರಿಗಳು ನೆರೆವು ನೀಡುತ್ತಾ ಬಂದಿದ್ದಾರೆ. ತಾಲೂಕಿನಾದ್ಯoತ ವಿಕಲಚೇತನರಿಗೆ ತ್ರಿಚಕ್ರದ ಬೈಸಿಕಲ್,ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡಿದ್ದಾರೆ. ನೈಜ ಫಲಾನುಭವಿಗಳು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಗೆ ಮನವಿಪತ್ರ ಸಲ್ಲಿಸಿದಲ್ಲಿ ಅವರ ಮನವಿಯನ್ನು ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ರವಾನಿಸಲಾಗುತ್ತದೆ.
ಅವರು ಅದನ್ನು ಪರಿಶೀಲಿಸಿ ಧನಸಹಾಯ ಸೇರಿದಂತೆ ವಿವಿದ ಸವಲತ್ತುಗಳನ್ನು ಮಂಜೂರು ಮಾಡುತ್ತಾರೆ.ಅರ್ಹ ನೈಜ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಅಲ್ಲದೆ ಕಷ್ಟದಲ್ಲಿರುವವರಿಗೆ ಶೌರ್ಯ ಮತ್ತು ವಿಪತ್ತು ಘಟಕದಿಂದ ಉಚಿತವಾಗಿ ಸೇವೆ ನೀಡಲಾಗುತ್ತದೆ.ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಸಾರ್ವಜನಿಕರು ಸಂಕಷ್ಟ ಎದುರಿಸುವ ಯಾವುದೇ ತುರ್ತು ಸಂಧರ್ಭಗಳಲ್ಲಿ ನಮ್ಮ ತಂಡ ಅಲ್ಲಿಗೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗುತ್ತಾರೆ ಎಂದು ತಿಳಿಸಿದರು.
ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಪಿ.ಶಿವಾನಂದ, ರವಿ ಪೂಜಾರಿ, ಬಬಿತಾ, ಮೇಲ್ವಿಚಾರಕ ದಾಮೋದರ್, ಸೇವಾ ಪ್ರತಿನಿಧಿ ಕಲಾದೇವಿ ಮತ್ತಿತರರಿದ್ದರು.
——--ವಿಜಯ್ ಕುಮಾರ್ ಟಿ