ಕೆ.ಆರ್.ಪೇಟೆ,ಮೇ.21: ತಾಲ್ಲೂಕಿನ ಸಿಂಧುಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.
ಈ ಹಿಂದೆ ಎರಡು ಭಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 6ಮಂದಿ ನಿರ್ದೇಶಕರು ಹಾಜರಾಗುತ್ತಿದ್ದರು. ಆದರೆ ಕಾಂಗ್ರೆಸ್-ರೈತ ಸಂಘ ಮೈತ್ರಿ ಕೂಟದ ನಿರ್ದೇಶಕರು ಗೈರು ಹಾಜರಾಗುತ್ತಿದ್ದರು. ಮೂರನೇ ಭಾರಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್-ಬಿಜೆಪಿಯಿಂದ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ರವಿ, ಕಾಂಗ್ರೆಸ್-ರೈತ ಸಂಘದಿಂದ ಅಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ಮೋಹನ್‌ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ತಲಾ 6ಮತಗಳು ಚಲಾವಣೆ ಆದ ಕಾರಣ ಫಲಿತಾಂಶಕ್ಕಾಗಿ ಚುನಾವಣಾಧಿಕಾರಿಗಳು ಲಾಟರಿ ಮೊರೆ ಹೋದ ಕಾರಣ ಅಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಎಸ್.ಆರ್.ಹೇಮಂತಕುಮಾರ್, ಉಪಾಧ್ಯಕ್ಷರಾಗಿ ಎಸ್.ಎಂ.ರವಿ ಅವರಿಗೆ ವಿಜಯಲಕ್ಷ್ಮಿ ಒಲಿದು ಜಯಶೀಲರಾದರು. ಶಾಸಕರಾದ ಹೆಚ್.ಟಿ.ಮಂಜಣ್ಣ ಅವರಿಗೆ ಈ ಗೆಲುವು ಅರ್ಪಿಸುವುದಾಗಿ ಅಧ್ಯಕ್ಷ-ಉಪಾಧ್ಯಕ್ಷರು ತಿಳಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಡಿ.ಆಶಾ, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ನಿಂಗರಾಜು ಕಾರ್ಯನಿರ್ವಹಿಸಿದರು.

ಈ ವೇಳೆ ಮಾತನಾಡಿ ಜೆಡಿಎಸ್ ಮುಖಂಡರಾದ ಎಸ್.ಐ.ಗಿರೀಶ್ ಅವರು ಡೇರಿ ಚುನಾವಣೆಯಲ್ಲಿ ನ್ಯಾಯಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ಎರಡು ಭಾರಿ ಚುನಾವಣೆಗೆ ಗೈರು ಹಾಜರಾಗಿ ಡೇರಿಗೆ ಸುಮಾರು 50ಸಾವಿರ ನಷ್ಟ ಉಂಟು ಮಾಡಿದ್ದಲ್ಲದೇ ವಾಮಮಾರ್ಗದಿಂದ ಅಧಿಕಾರಕ್ಕೇರಲು ಪ್ರಯತ್ನಿಸಿದ್ದ ಕಾಂಗ್ರೆಸ್-ರೈತ ಸಂಘದ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ. ದೇವರು ಒಳ್ಳೆಯತನಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾನೆ. ಎರಡು ಭಾರಿ ಗೈರು ಹಾಜರಾಗಿದ್ದವರಿಗೆ ಸೋಲಿನ ಶಿಕ್ಷೆ ನೀಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

ನೂತನ ಅಧ್ಯಕ್ಷ ಎಸ್.ಆರ್.ಹೇಮಂತಕುಮಾರ್ ಮಾತನಾಡಿ ಸಂಘದ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರು ಹಾಗೂ ಮುಖಂಡರ ಸಹಕಾರ ಪಡೆದು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘಕ್ಕೆ ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ಎಸ್.ಎಂ.ರವಿ ಮಾತನಾಡಿ ಸಂಘದ ಅಭಿವೃದ್ದಿಗೆ ಅಧ್ಯಕ್ಷರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಮುನ್ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಎಸ್.ಮೋಹನ್, ಶೋಭಾಮಂಜೇಗೌಡ, ಕೃಷ್ಣೇಗೌಡ, ಲೋಕೇಶ್, ಮುಖಂಡರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ದಿವ್ಯಗಿರೀಶ್, ಗ್ರಾ.ಪಂ.ಸದಸ್ಯ ನವೀನ್‌ಕುಮಾರ್, ಮುಖಂಡರಾದ ಬಾಬು, ವೇಣುಗೋಪಾಲ್, ಹರೀಶ್, ಮಂಜುನಾಥ್, ಸೋಮೇಶ್, ರಂಗಣ್ಣ, ಮಧು, ಪ್ರಮೋದ್, ಮಂಜುನಾಥ್, ಮೋಹನ್, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.