ತುಮಕೂರು-ನಡೆದಾಡುವ ದೇವರಾದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ದಿವ್ಯ ಕೃಪಾದೃಷ್ಟಿಗೆ ಪಾತ್ರರಾಗಿದ್ದ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರು ಒಬ್ಬ ಆದರ್ಶ ಶರಣರಂತೆ ಬದುಕಿ ಮುಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದರು ಎಂದು ಸಿದ್ಧಗಂಗಾ ಮಠದ ಪೂಜ್ಯ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ತುಮಕೂರು ಜಿಲ್ಲಾ ಹಾಗು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಲಿಂ.ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರ ಸಾಮಾಜಿಕ ಸೇವಾನಿಷ್ಠೆ ವಿಚಾರ ಸಂಕಿರಣವನ್ನು ಶ್ರೀಕ್ಷೇತ್ರದ ಕನ್ನಡ ಪಂಡಿತ್ ಕಾಲೇಜಿನ ಸ್ವಾಮೀಜಿ ಸಭಾಂಗಣದಲ್ಲಿ ಆಶೀರ್ವಚನ ನೀಡುತ್ತಾ ಶರಣರು ಬದುಕಿದ ರೀತಿ ಎಂದೆಂದಿಗೂ ಆದರ್ಶ.
ಬ್ರಹ್ಮಚಾರಿಯಾಗಿ ಬದುಕಿದ್ದ ಮಲ್ಲಿಕಾರ್ಜುನಯ್ಯನವರು ಅತ್ಯಂತ ಬಡತನದಲ್ಲಿ ಬಂದು, ಶ್ರೀ ಶಿವಕುಮಾರಸ್ವಾಮಿಗಳ ಆದೇಶದಂತೆ ಮೈಸೂರಿನಲ್ಲಿ ಓದಿ, ನಂತರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ನೂರಾರು ಸಾಹಿತಿಗಳೊಂದಿಗೆ ಪತ್ರ ವ್ಯವಹಾರ ಮಾಡುತ್ತಾ ಸಾಹಿತ್ಯ ಪರಿಚಾರಕರೂ ಆಗಿದ್ದರು. ಕುವೆಂಪು, ಶಿವರಾಮಕಾರಂತ, ಹರಿದಾಸಭಟ್ಟ, ವಿ.ಸೀತಾರಾಮಯ್ಯರವರೊಂದಿಗೆ ನೂರಾರು ಪತ್ರ ಬರೆದವರು ಎಂದು ಶ್ಲಾಘಿಸಿದರು.

ನಂತರ ವಿಚಾರ ಸಂಕಿರಣ ಉದ್ಘಾಟಿಸಿದ ಟಿ.ಕೆ.ನಂಜುಂಡಪ್ಪನವರು ಶರಣ ಶ್ರೇಷ್ಠ ಮಲ್ಲಿಕಾರ್ಜುನಯ್ಯನವರ ಪತ್ರಗಳಲ್ಲಿನ ಜೀವನ ಮೌಲ್ಯ ಕುರಿತು ಮಾಡನಾಡಿದರು. ವಿದ್ವಾನ್ ಕೋ.ರಂ.ಬಸವರಾಜುರವರು ಸಾಮಾಜಿಕ ಚಿಂತನೆ ಕುರಿತು ಮಾತನಾಡಿದರು. ಅಧ್ಯಕ್ಷ ಸ್ಥಾನದಿಂದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯನವರು ಮಾತನಾಡುತ್ತಾ ಶರಣ ಸಾಹಿತ್ಯ ಪರಿಷತ್ತಿನ ಸೇವಾ ಚಟುವಟಿಕೆಗಳಲ್ಲಿ ದತ್ತಿ ನೀಡಿರುವುದರಿಂದ ಶರಣ ತತ್ವಗಳನ್ನು ಬಿತ್ತನೆ ಮಾಡುವ ಕಾರ್ಯವಾಗಿದೆ ಎಂದರು.
ಮಾದಾಪುರ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿಶ್ವನಾಥಯ್ಯನವರು ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ನಿವೃತ್ತ ನೌಕರ ಶಿವರುದ್ರಯ್ಯ ಹಾಗೂ ರೇಣುಕಾರಾಧ್ಯರಿಗೆ ಶರಣ ಸೇವಾ ಗೌರವ ನೀಡಿ ಸತ್ಕರಿಸಲಾಯ್ತು.
ಇಡೀ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್.ಎಸ್.ನಿರಂಜನಮೂರ್ತಿ ಹಾಗೂ ಮುಖ್ಯ ಶಿಕ್ಷಕರಾದ ರಾಮಕೃಷ್ಣ, ತೋಂಟಾರಾಧ್ಯ, ಡಾ. ಆರ್.ಸೌಮ್ಯಶ್ರೀ ಹಾಗೂ ಅಧ್ಯಾಪಕ ವೃಂದ ಪೂರ್ಣ ಸಹಕಾರ ನೀಡಿದರು. ಚಿ|| ಧನುಷ್ ಹಾಗೂ ಕು|| ಹಾನ್ಸಿ ವಚನ ಗಾಯನ ಪ್ರಾರ್ಥನೆ ಮಾಡಿದರು.

ಈ ವೇಳೆ ಲಿಂ.ಸಿ.ಎಂ.ರುದ್ರಾರಾಧ್ಯ ಶರ್ಮಾರವರ ಸ್ಮರಣಾರ್ಥ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯ್ತು. ರಾಮಕೃಷ್ಣ ಸ್ವಾಗತಿಸಿ, ವೀರಭದ್ರಯ್ಯ ವಂದಿಸಿದರು. ಅಮರಗೋಪಾಲ್ ನಿರೂಪಿಸಿದರು.