ಕೊರಟಗೆರೆ:– ಕ್ಷೇತ್ರದ ಜನಪ್ರಿಯ ಶಾಸಕರು ರಾಜ್ಯದ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಕೆ. ಹೇಳಿದರು.
ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಇಲಾಖೆ ಮುಂದಾಗಿದ್ದು, ದಾಸೋಹ ಭವನದ ದುರಸ್ತಿ ಕಾರ್ಯ, ಕುಡಿಯುವ ನೀರು, ಶೌಚಾಲಯ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಮುಡಿ ತೆಗೆಯುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ, ಸ್ವಚ್ಛತೆ ಇನ್ನು ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲೇ ಬಗೆಹರಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತೇವೆ ಎಂದರು.
ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ನಾಗಣ್ಣ, ಡಾ.ಜಿ.ಪರಮೇಶ್ವರ್ ಅವರ ಹೆಸರಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಸಾಗರವೇ ಹರಿದು ಬಂದಿದೆ. ರಥೋತ್ಸವಕ್ಕೆ ಬಂದಂತಹ ಭಕ್ತಾದಿಗಳಿಗೆ “ಹೋಳಿಗೆ” ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರು ಶ್ರೀದೇವರ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು.
ಮುಜರಾಯಿ ಇಲಾಖೆಯ ಸಕಲ ಸಿದ್ಧತೆಯೊಂದಿಗೆ ರಥೋತ್ಸವ ಜರುಗಿತು. ಇಲಾಖೆ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾದಂತಹ ಸಾವಿರಾರು ಜನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಕೇಳಿಕೊಂಡು ರಥೋತ್ಸವ ಕಾರ್ಯವನ್ನು ಯಶಸ್ವಿಗೊಳಿಸಿದರು.

ಸ್ಥಳೀಯ ರಂಗಭೂಮಿ ಕಲಾವಿದರಿಂದ ಇಂದು ರಾತ್ರಿ ಪೌರಾಣಿಕ ನಾಟಕವಾದ ವಿರಾಟ ಪರ್ವ ಮತ್ತು ನಾಳೆ ರಾತ್ರಿ ಕುರುಕ್ಷೇತ್ರ ಎಂಬ ನಾಟಕ ಆಯೋಜನೆ ಮಾಡಲಾಗಿದೆ.
ವರದಿ – ಶ್ರೀನಿವಾಸ್ ಕೊರಟಗೆರೆ