ರಾಮನಾಥಪುರ-ವತ್ತೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ಲೋಕಾರ್ಪಣೆ: ತಣ್ಣಿರುಹಳ್ಳ ಮಠದ ಶ್ರೀಗಳಿಂದ ಉದ್ಘಾಟನೆ

ರಾಮನಾಥಪುರ, ಮೇ 7: ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಮುಸವತ್ತೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಶ್ರದ್ಧೆಯಿಂದ ನೆರವೇರಿತು.

ಹಾಸನ ಜಿಲ್ಲೆಯ ತಣ್ಣಿರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿಯವರು ಗರ್ಭಗುಡಿ ಶಿಖರ ಕಲಸರೋಹಣ ಮಾಡಿ, ಪ್ರವೇಶ ಶಿಲಾ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ಧಾರ್ಮಿಕ ಕೇಂದ್ರಗಳ ಸ್ಥಾಪನೆಯಿಂದ ಧಾರ್ಮಿಕತೆಯ ಬೆಳವಣಿಗೆ ಸಾಧ್ಯವಾಗುತ್ತದೆ. ದೇವಾಲಯಕ್ಕೆ ಹಣ್ಣು-ಕಾಯಿ ತೆಗೆದುಕೊಂಡು ಹೋಗುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ ದೇವಾಲಯದಿಂದ ಹಿಂದಿರುಗುವಾಗ ಅಹಂಕಾರ, ಕೋಪ, ದ್ವೇಷ ಹಾಗೂ ಕೆಟ್ಟ ಭಾವನೆಗಳನ್ನು ಅಲ್ಲಿ ಬಿಟ್ಟು ಬರುವುದು ನಮಗೆ ಒಳಿತು ತರಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾರ್ಜವಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಅಖಿಲ ಭಾರತ ಮಹಾಸಭಾ ಅಧ್ಯಕ್ಷರು ಸುರೇಶ್, ವಿಶ್ವ ವೀರಶೈವ-ಲಿಂಗಾಯತ ಮಹಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ವೇದಮೂರ್ತಿ ದೇವರಾಜ ಶಾಸ್ತ್ರಿ, ಕದಳಿ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಕಮಲಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ್, ಶಾಂಬೇಶ್, ಮಂಜುನಾಥ್ ಹಾಗೂ ಗ್ರಾಮದ ಪ್ರಮುಖರು ಶ್ರೀಕಂಠಯ್ಯ, ಶಿವಪ್ರಕಾಶ್, ರುದ್ರಪ್ಪ, ದೇವರಾಜಮೂರ್ತಿ, ಮಹದೇವಪ್ಪ, ಸಂಜಯ್, ಅಶೋಕ್, ಪ್ರಸನ್ನ, ಷಮ್ಮುಖ ಶರತ್ ಮುಂತಾದವರು ಭಾಗವಹಿಸಿದರು.

ಕಾರ್ಯಕ್ರಮದ ಸ್ವಾಗತ ಹಾಗೂ ವಂದನೆಯನ್ನು ಶರಣೆ ರಶ್ಮಿ ಪರಮೇಶ್ ಮಾಡಿದರು. ಕಾರ್ಯಕ್ರಮವು ಧಾರ್ಮಿಕ ಶ್ರದ್ಧೆ, ಸಾಮಾಜಿಕ ಒಗ್ಗಟ್ಟು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಗೆ ನೆರವಾಯಿತು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

-ಶಶಿಕುಮಾರ

Leave a Reply

Your email address will not be published. Required fields are marked *

× How can I help you?