ಶ್ರೀರಂಗಪಟ್ಟಣ : ಹನ್ನೆರಡನೇ ಶತಮಾನದಲ್ಲಿ ಮೌಢ್ಯತೆಯ ವಿರುದ್ಧ ಹೋರಾಡಿ ಸರ್ವರನ್ನೂ ಸಮಭಾವದಿಂದ ಕಂಡು ಅನುಭವಮಂಪಟ ಕಟ್ಟಿದ ಶ್ರೇಷ್ಠ ಸಂತ ವಿಶ್ವಗುರು ಬಸವಣ್ಣನವರು ಜಗತ್ತಿಗೆ ಜ್ಞಾನದ ಬೆಳಕು ತೋರಿದ ಮಹಾನ್ ಚೇತನ ಎಂದು ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷ ಎಂ.ಎಲ್.ದಿನೇಶ್ ಹೇಳಿದರು.
ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರಸ್ವಾಮಿ ಸಂಘದ ವತಿಯಿಂದ ಶ್ರೀಕೂಡಲಸಂಗ ದೇವಾಲಯದ ಆವರಣದಲ್ಲಿ ನಡೆದ ಶ್ರೀಬಸವೇಶ್ವರರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇಲು ಕೀಳೆಂಬ ಭಾವವನ್ನು ತೊರೆದು ಎಲ್ಲರೂ ಒಂದೇ ಎಂಬ ಐಕ್ಯಮಂತ್ರವನ್ನು ಜಗತ್ತಿಗೆ ವಚನಗಳ ಮೂಲಕ ಸಾರಿ ಹೇಳಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕಾದ ಅನಿವರ‍್ಯತೆ ಇಂದು ಎದುರಾಗಿದೆ. ಬಸವಣ್ಣನವರು ಮಾಡಿದ ಹೋರಾಟವನ್ನು ಅರಿತರೆ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

ದಿವ್ಯ ಸಾನಿಧ್ಯವಹಿಸಿದ್ದ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿಯವರು ಮಾತನಾಡಿ, ಸತ್ಯ ಪ್ರತಿಪಾದನೆ ಮಾಡುವ ಮೂಲಕ ಜಗತ್ತಿಗೆ ಬೆಳಕಾದ ಬಸವಾದಿ ಶಿವಶರಣರು ಹಾಕಿಕೊಟ್ಟ ಮೌಲ್ಯಯುತವಾದ ಜೀವನ ಪಥವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ. ಬಸವಣ್ಣನವರು ರೈತರ ಕಾಯಕದಲ್ಲಿ ದೇವರನ್ನು ಕಂಡಂತಹವರು. ಕೃಷಿ ಕೃತ್ಯ ಕಾಯಕ ಮಾಡುವವರ ಪರವಾಗಿ ನಿಂತ ಮಹಾನ್ ಚೇತನ. ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರೆ ಸೌಹಾರ್ಧಯುತ ಬದುಕು ನಡೆಸಲು ಸಾಧ್ಯ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಕಾಯಕವೇ ಕೈಲಾಸವೆಂಬ ದಿವ್ಯಮಂತ್ರವನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣನವರು ದುಡಿಯುವ ವರ್ಗದ ಪರವಾಗಿ ಧ್ವನಿ ಎತ್ತಿದ ಮೇರುಪುರುಷ. ದುಡಿಮೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂಬುದನ್ನು 900ವರ್ಷಗಳ ಹಿಂದೆಯೇ ಶಿವಶರಣರು ಎಲ್ಲಾ ಬಗೆಯ ಕಾಯಕವನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಿದ್ದಲಿಂಗಯ್ಯ ಮಾತನಾಡಿ, ಇಡೀ ವಿಶ್ವಕ್ಕೆ ಬೇಕಾದ ಎಲ್ಲಾ ಬೋದನೆಯನ್ನು ಹನ್ನೆರಡನೇ ಶತಮಾನದ ಶರಣರು ನೀಡಿ ಹೋಗಿದ್ದಾರೆ. ಅವುಗಳನ್ನು ಅನುಸರಿಸಬೇಕಾದ್ದು ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ. ಕಾಯಕ, ದಾಸೋಹ, ಧಾರ್ಮಿಕ, ಸಮಾನತೆ, ಅರಿವು, ಆಚಾರಗಳ ಬಗ್ಗೆ ಅತ್ಯಂತ ಸರಳವಾಗಿ ಜನಮಾನಸದಲ್ಲಿ ಸದಾ ಉಳಿಯುವಂತೆ ಬಸವಣ್ಣನವರು ಸಂದೇಶ ಸಾರಿದ್ದಾರೆ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಇವನಾರವ ಇವನಾರವನೆಂದೆನಿಸದೆ ಇವನಮ್ಮವನೆಂದೆನಿಸಯ್ಯ ಎಂದು ದೀನ ದಲಿತ ಬಲಿತ ಕಲಿತವರೆಲ್ಲರನ್ನೂ ಒಪ್ಪಿ ಅಪ್ಪಿಕೊಂಡ ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮೊದಲ ದಾರ್ಶನಿಕ ಬಸವಣ್ಣನವರು ವಿಶ್ವಕ್ಕೆ ಗುರುವಾಗಿದ್ದಾರೆ ಎಂದರು.

ಕೋಟೆಯ ಬೀಡು ಶ್ರೀರಂಗಪಟ್ಟಣದಲ್ಲಿ ಬಸವಭವನ ನಿರ್ಮಾಣ ಮಾಡಲು ಶಾಸಕರು ಹಾಗೂ ಪುರಸಭೆಯ ಅಧ್ಯಕ್ಷರು ಸಹಕರಿಸಬೇಕೆಂದು ಬಸವಾಭಿಮಾನಿಗಳ ಪರವಾಗಿ ಮನವಿ ಮಾಡಿದರು.
ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಎಸ್.ಎನ್. ದಯಾನಂದ್, ಪೂರ್ಣಿಮಾ ಪರಶಿವಮೂರ್ತಿ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್‌ಬೆಟ್ಟಹಳ್ಳಿ, ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ದೀಪು, ವಕೀಲ ಮರಿಸ್ವಾಮಿ, ಕುಮಾರ್ ಮತ್ತಿತರರಿದ್ದರು.

ಬಸವಣ್ಣನವರ ಭಾವಚಿತ್ರವಿದ್ದ ರಥೋತ್ಸವಕ್ಕೆ ಬೇಬಿಬೆಟ್ಟದ ಶ್ರೀ ಶಿವಬಸವಸ್ವಾಮೀಜಿಯವರು ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಬಸವಭಕ್ತರು ಪಾಲ್ಗೊಂಡಿದ್ದರು.