ತುಮಕೂರು: ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಆರ್. ಕುರಂದವಾಡ ಹಾಗೂ ಕಾರ್ಯದರ್ಶಿ ಟಿ.ಎನ್. ಶ್ರೀಕಂಠಸ್ವಾಮಿ ಅವರು ಭೇಟಿ ಮಾಡಿ ಜಿಲ್ಲೆಯ ವಾಣಿಜ್ಯ, ಕೈಗಾರಿಕಾ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ಬೇಡಿಕೆಗಳ ಪ್ರಸ್ತಾವನೆಯನ್ನು ಸಲ್ಲಿಸಿ, 2025-26 ನೇ ಸಾಲಿನ ಬಜೆಟ್ ನಲ್ಲಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಶೈಕ್ಷಣಿಕ ನಗರ ಎಂದು ಪ್ರಸಿದ್ದಿಯಾಗಿರುವ ತುಮಕೂರು ಜಿಲ್ಲೆಯಲ್ಲಿ ಏಳು ಇಂಜನಿಯರಿಂಗ್ ಕಾಲೇಜು, ಮೂರು ಮೆಡಿಕಲ್ ಕಾಲೇಜುಗಳು. ಸುಮಾರು ಐಟಿಐ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ ತುಮಕೂರು ಯನಿರ್ವಸಿಟಿ ಇದ್ದು ಸುಮಾರು 50ರಿಂದ 60 ಸಾವಿರ ಜನರು ತುಮಕೂರಿನಿಂದ ಬೆಂಗಳೂರಿಗೆ ವಿವಿಧ ಐಟಿ ಕಂಪನಿಗಳಿಗೆ ಹೋಗುತ್ತಿರುವುದರಿಂದ ತುಮಕೂರಿನಲ್ಲೇ ಐಟಿ ಹಬ್ ನ್ನು ನಿರ್ಮಾಣ ಮಾಡಬೇಕು ಎಂದು ಕೋರಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಬರುವ ಕೈಗಾರಿಕೆಗಳಿಗೆ ಆಸ್ತಿತೆರಿಗೆಯನ್ನು KIADB ಇಂದ ಮಹಾನಗರಪಾಲಿಕೆಗೆ ವರ್ಗಾವಣೆ ಮಾಡಿಕೊಂಡು ನಂತರ ಪ್ರತ್ಯೇಕ ಕೈಗಾರಿಕಾ ವರ್ಗಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್‌ಷಿಯಲ್ ಸ್ಲಾಬ್ ಗಿಂತ ತೆರಿಗೆಯನ್ನು ಕಡಿಮೆಮಾಡಿ ಪ್ರಸ್ತುತ ಗ್ರಾಮಪಂಚಾಯಿತಿ ವ್ಯಾಪಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆಯಂತೆ ನಗರ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ತೆರಿಗೆಯನ್ನು ನಿಗದಿಪಡಿಸುವುದು ಹಾಗೂ ಕೈಗಾರಿಕಾ ಪ್ರದೇಶವು ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಪ್ರಸ್ತುತ ವರ್ಷದಿಂದ ನಾವು ತೆರಿಗೆಯನ್ನು ಕಟ್ಟಲು ಸಿದ್ದರಿದ್ದೇವೆ.

KIADB ಅಂತಿಮ ದರ ನಿರ್ದಾರ ಮಾಡುವ ಬಗ್ಗೆ ಅಲಾಟ್‌ಮೆಂಟ್ ದರ ಅಂತಿಮ ದರಕ್ಕೆ 20% ಮೀರಿರಬಾರದು ಇಲ್ಲದಿದ್ದರೆ ಆ ಕೈಗಾರಿಕಾ ಪ್ರಾಜೆಕ್ಟ್ ವಿಫಲವಾಗುತ್ತದೆ. ಟ್ರೇಡ್ ಆಂಡ್ ಇಂಡಸ್ಟ್ರಿಗಳಿಗೆ ಹಾಲಿ ಇರುವ ವೃತ್ತಿ ತೆರಿಗೆಯನ್ನು ರದ್ದು ಮಾಡುವುದು. ಈಗಾಗಲೇ ಜಿ.ಎಸ್.ಟಿ. ಅಡಿಯಲ್ಲಿ ಎಲ್ಲಾ ದಾಖಲೆಗಳನ್ನು ಒದಗಿಸಿ ನೋಂದಣಿಯಾಗಿರುವ ಟ್ರೇಡರ್ಸ್‌ಗಳಿಗೆ ಟ್ರೇಡ್ ಲೈಸೆನ್ಸಸ್ ಅಬಾಲಿಶ್ ಮಾಡುವುದು.
ಬೆಂಗಳೂರಿನಿಂದ ತುಮಕೂರು ಹಾಗೂ ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಮೆಟ್ರೋ ಟ್ರೈನ್ ಅನ್ನು ವಿಸ್ತರಿಸುವುದು, 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ತಮ್ಮ ಜೀವಿತಾವಧಿಯಲ್ಲಿ ಸರ್ಕಾರಕ್ಕೆ ಎಲ್ಲಾ ಬಗೆಯ ತೆರಿಗೆಗಳನ್ನು ಕಟ್ಟುತ್ತಾಬಂದಿದ್ದು ಸರಿಯಷ್ಟೆ, ಇವರಿಗೆ ತಮ್ಮ 60 ವರ್ಷದ ನಂತರ ವಯಸ್ಸಿನಲ್ಲಿ ಪಿಂಚಣಿ ಯೋಜನೆ ಜಾರಿಗೊಳಿಸುವುದು.
ಕೈಗಾರಿಕಾ ಪ್ರದೇಶಗಳಲ್ಲಿ ಬಾಕಿ ಇರುವ ಪೂರ್ಣಗೊಳ್ಳದ ಮೂಲಭೂತ ಸೌಕರ್ಯಗಳನ್ನು ಅತಿ ಶೀಘ್ರವಾಗಿ ಪೂರ್ಣಗೊಳಿಸಿ ಕೊಡುವುದು, ನಗರ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗುವಂತೆ ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಪ್ರತ್ಯೇಕವಾದ ಕೆಐಎಡಿಬಿ ಕಚೇರಿ, ಅಗ್ನಿಶಾಮಕ ಠಾಣೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ, ಬೆಸ್ಕಾಂ ಮುಖ್ಯ ಕಚೇರಿ, ಬ್ಯಾಂಕುಗಳ ಸ್ಥಾಪನೆ. ಹಾಗೂ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ಆರೋಗ್ಯವಿಮೆ, ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆಯೂ ಕೋರಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿ ಆಸ್ಥಿತೆರಿಗೆಯನ್ನು ಕನಸ್ಟ್ರಕ್ಷನ್ ವ್ಯಾಲ್ಯೂ ಪ್ರಕಾರ ನಿಗದಿಪಡಿಸಬೇಕು ಗೈಡೆನ್ಸ್ ವ್ಯಾಲ್ಯೂ ಪ್ರಕಾರ ಮಾಡಬಾರದು. ವರ್ತಕರಿಗೆ ಹಾಗೂ ರೈತರಿಗೆ ಅನುಕೂಲವಾಗಲು ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸೂಕ್ತವಾದ ಜಾಗದಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಉಗ್ರಾಣಗಳನ್ನು ಸ್ಥಾಪನೆ ಮಾಡುವುದು.
ಮಾರುಕಟ್ಟೆ ವ್ಯಾಪಾರ ಕೇಂದ್ರ ಸ್ಥಳಗಳಲ್ಲಿ ಬಹುಜನರಿಗೆ ಅನುಕೂಲವಾಗುವಂತೆ ಮುಖ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು. ತುಮಕೂರು ಜಿಲ್ಲೆಗೆ ಮಂಜೂರಾಗಿರುವ ESI ಆಸ್ಪತ್ರೆಗೆ ಜಾಗವನ್ನು ನಿಗಧಿಮಾಡಿ ಹಾಗೂ ಆದಷ್ಟು ಬೇಗ ಪ್ರಾರಂಭ ಮಾಡುವುದು. ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದು. ತೆಂಗು, ಹುಣಸೇ, ಮಾವು,ಕಡಲೇಕಾಯಿ ಹಾಗೂ ಹಲಸು ಉತ್ಪನ್ನಗಳ ಅಭಿವೃದ್ಧಿ ಘಟಕಗಳನ್ನು ಜಿಲ್ಲೆಯ ಸೂಕ್ತ ಸ್ಥಳಗಳಲ್ಲಿ ಸ್ಥಾಪನೆ ಮಾಡುವುದು, ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕುರಿತು ಬಜೆಟ್‌ನಲ್ಲಿ ಪ್ರಕಟಿಸುವಂತೆಯೂ ಮನವಿ ಮಾಡಿದ್ದಾರೆ.
ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಕೈಗಾರಿಕಾ ವಸಾಹತುಗಳ ಸ್ಥಾಪನೆ. ತುಮಕೂರುನಗರವು ಈಗಾಗಲೇ ಸ್ಮಾರ್ಟ್‌ಸಿಟಿಯಾಗಿದ್ದು ಇದನ್ನು ಅಂತರಾಷ್ಟ್ರೀಯಮಟ್ಟದ ಮೂಲಬೂತಸೌಕರ್ಯಗಳನ್ನು ಕಲ್ಪಿಸುವಮೂಲಕ ಮೇಲ್ದರ್ಜೆಗೆ ಏರಿಸುವುದು. ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರವಾಸೋದ್ಯಮ ಹಾಗೂ ಮೂಲಭೂತ ಚಟುವಟಿಕೆಗಳ ಸಂಸ್ಥೆಗಳಿಗೆ ಹೆಚ್ಚಿನ ಸಹಾಯಧನ ನೀಡುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಂತೆ ವಿನಂತಿಸಿದ್ದಾರೆ.

ತುಮಕೂರಿನಲ್ಲಿರುವ ಪಾಸ್ ಪೋರ್ಟ್ ಆಫಿಸನ್ನು ಮೇಲ್ದರ್ಜೆಗೇರಿಸುವುದು, ತುಮಕೂರು ನಗರದಿಂದ ನಾಗಸಂದ್ರ ಮೆಟ್ರೋವರೆಗೆ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು. ತುಮಕೂರಿನಿಂದ ದಾಬಸ್‌ಪೇಟೆ, ದೊಡ್ಡಬಳ್ಳಾಪುರ ಮಾರ್ಗವಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸುವವರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು. ತುಮಕೂರಿನಿಂದ ಬೆಂಗಳೂರಿಗೆ ವ್ಯಾಪಾರಕ್ಕೆ ಹೋಗುವ ಹಾಗೂ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತುಮಕೂರು ಮತ್ತು ಬೆಂಗಳೂರು ನಡುವೆ ಗಂಟೆಗೆ ಒಂದರಂತೆ ರೈಲುಗಳನ್ನು ಓಡಿಸುವಂತೆ ಕೋರಿದ್ದಾರೆ.
ಈ ಎಲ್ಲ ಅಂಶಗಳನ್ನು ಈ ವರ್ಷದ ಬಜೆಟ್ ನಲ್ಲಿ ಮಂಡಿಸುವಂತೆ ಹಾಗೂ ತುಮಕೂರು ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯತೆ ಕಲ್ಪಿಸುವಂತೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.