ಚಿಕ್ಕಮಗಳೂರು, ಮೇ.23:- ಆದಿವಾಸಿ ಸಮುದಾಯದವರಿಗೆ ಗುಣಮಟ್ಟದ ಪೌಷ್ಠಿಕ ಆಹಾರ ವಿತರಿಸಬೇಕು ಎಂದು ಸಮುದಾಯದ ಮುಖಂಡರು ಶುಕ್ರವಾರ ಸಮಾಜ ಗಿರಿಜನ ಅಭಿವೃದ್ದಿ ಇಲಾಖೆ ಸಮನ್ವ ಯಾಧಿಕಾರಿ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಜನಾಂಗದ ಮುಖಂಡ ಗೋಪಾಲ್ ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಸೇರಿದಂತೆ ವಿವಿಧೆಡೆ ಆದಿವಾಸಿ ಹಸಲರು, ಗೌಡಲು ಜನಾಂಗದವರಿಗೆ ಆಹಾರ ಪದಾರ್ಥಗಳು ಗುಣಮಟ್ಟ ಕಾಪಾಡದೇ ಕಳಪೆಯಾಗಿ ಬೇಕಾಬೇಟ್ಟಿಯಾಗಿ ನೀಡಲು ಮುಂದಾಗುತ್ತಿದೆ ಎಂದರು.

ಆದಿವಾಸಿ ಜನಾಂಗದವರಿಗೆ ವರ್ಷಪೂರ್ತಿ ಸರ್ಕಾರ ಪೌಷ್ಟಿಕ ಆಹಾರ ಯೋಜನೆ ಜಾರಿಗೆ ತಂದು ವಿತರಿಸಲು ಸೂಚಿಸಿದ್ದು ಕಳೆದ ಎರಡು ತಿಂಗಳಿನಿಂದ ಬಾಳೆಹೊನ್ನೂರು ಸುತ್ತಮುತ್ತಲು ಅಕ್ಕಿ, ಬೇಳೆಕಾಲು ಪದಾರ್ಥಗಳನ್ನು ರಸಗೊಬ್ಬರ ಚೀಲಗಳನ್ನು ತುಂಬಿಸಿ ಬಿಸಿಎಂ ಹಾಸ್ಟೆಲ್‌ಗಳ ಮೂಲಕ ವಿತರಿಸಲು ಸಜ್ಜಾ ಗುತ್ತಿದೆ ಎಂದು ಹೇಳಿದರು.
ಕಳಪೆ ಆಹಾರದ ಸಂಬಂಧ ಅಧಿಕಾರಿಗಳಿಗೆ ದೂರನ್ನು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಲ್ಲ ಕೊಳೆತು ನಾರಿ ನೀರಾಗುತ್ತಿದೆ. ಅಧಿಕ ಪೌಷ್ಠಿಕ ಆಹಾರವನ್ನು ಗೊಬ್ಬರದ ಚೀಲಗಳಲ್ಲಿ ತುಂಬಿಟ್ಟು ಆದಿ ವಾಸಿಗಳಿಗೆ ವಿಷಯುಕ್ತ ಆಹಾರವನ್ನು ಉಣಿಸುವ ಕೆಲಸ ಗುತ್ತಿಗೆದಾರರು ಮಾಡುತ್ತಿದ್ದಾರೆ ಎಂದರು.

ಕೂಡಲೇ ಕಳಪೆ ಆಹಾರ ಪದಾರ್ಥಗಳನ್ನು ತೆರವುಗೊಳಿಸಿ ಗುಣಮಟ್ಟದ ಆಹಾರವನ್ನು ವಿತರಿಸಬೇಕು ಹಾಗೂ ಕಳಪೆ ಆಹಾರ ಪೂರೈಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಜಿಲ್ಲಾವಾರು ಟೆಂಡರ್ ನೀಡ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಸಮುದಾಯದ ಮುಖಂಡರುಗಳಾದ ಚಂದು, ರಮೇಶ್, ಮಧು, ಗೋಪಾಲ್ ಮತ್ತಿತರರಿದ್ದರು.