ಕೆ.ಆರ್.ಪೇಟೆ: ಹೇಮಾವತಿ ಜಲಾನಯನ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಜಲಾನಯನ ಪ್ರದೇಶದ ಎಲ್ಲಾ 18 ಶಾಸಕರು ಒಗ್ಗಟ್ಟಿನ ಹೋರಾಟ ನಡೆಸುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.
ಹೇಮಾವತಿ ನೀರಿನ ವಿಚಾರದಲ್ಲಿ ನಡೆಸಬೇಕಾದ ಮುಂದಿನ ಹೋರಾಟದ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಮುಖಂಡ ಸಭೆಯಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ತಾಲೂಕಿನ ರೈತರ ಧ್ವನಿಯಾಗಿ ರಾಜ್ಯ ವಿಧಾನ ಸಭೆಯಲ್ಲಿ ಹೇಮಾವತಿ ನೀರಿಗಾಗಿ ಧ್ವನಿಯೆತ್ತಿದ್ದಾರೆ. ಇದಕ್ಕಾಗಿ ರೈತಸಂಘ ಅವರನ್ನು ಅಭಿನಂಧಿಸುತ್ತದೆ. ಹೇಮಾವತಿ ನೀರಿಗಾಗಿ ಶಾಸಕ ಹೆಚ್.ಟಿ.ಮಂಜು ಸದನದಲ್ಲಿ ಧ್ವನಿಯೆತ್ತಿದಾಗ ಅವರ ಧ್ವನಿ ಏಕಂಗಿಯಾಗಿತ್ತು.
ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದ ನಾಗಮಂಗಲದ ಶಾಸಕ ಹಾಗೂ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹೇಮಾವತಿ ಜಲಾನಯನ ಪ್ರದೇಶದ 18ವಿಧಾನಸಭಾ ಸದಸ್ಯರು ಇದ್ದಾರೆ. ಈ ಪೈಕಿ ಯಾವುದೇ ಶಾಸಕರು ಹೇಮಾವತಿ ಭಾಗದ ರೈತರ ಹಿತಕ್ಕಾಗಿ ಸದನದಲ್ಲಿ ಧ್ವನಿಯೆತ್ತಲ್ಲಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಕೆ.ಆರ್.ಎಸ್ ಜಲಾಶಯದ ನೀರಿನ ವಿಚಾರ ಬಂದಾಗ ಆ ಭಾಗದ ಎಲ್ಲಾ ಶಾಸಕರು ಪಕ್ಷಬೇದ ಮರೆತು ರೈತರ ಪರ ನಿಲ್ಲುತ್ತಾರೆ.

ಆದರೆ ಹೇಮಾವತಿ ಜಲಾನಯನ ಪ್ರದೇಶದ ಯಾವುದೇ ಶಾಸಕರು ರೈತರ ಪರವಾಗಿ ಮಾತನಾಡದಿರುವುದು. ಹೇಮಾವತಿ ನೀರನ್ನು ಕೆ.ಆರ್.ಎಸ್. ಜಲಾಶಯಕ್ಕೆ ಬಸಿದುಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗಿದೆ ಎಂದು ಖಂಡಿಸಿದ್ದಾರೆ.
ರಾಜ್ಯದಲ್ಲಿ ಬಿರು ಬೇಸಿಗೆ ಆರಂಭವಾಗಿದೆ. ಕೆರೆ-ಕಟ್ಟೆಗಳು ಬರಿದಾಗಿದ್ದು ಜನ-ಜಾನುವಾರುಗಳು ಮತ್ತು ಪ್ರಾಣಿ ಪಕ್ಷಗಳಿಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ತಾಲೂಕು ರೈತಸಂಘ ಈಗಾಗಲೇ ಹೇಮೆಯ ನೀರಿಗಾಗಿ ಹೋರಾಟ ಆರಂಭಿಸಿದೆ. ನಾವು ಬೇಸಿಗೆ ಬೆಳೆಗೆ ನೀರು ಕೇಳುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹೇಮಾವತಿ ಜಲಾಶಯದಿಂದ ಒಂದೆರಡು ಟಿ.ಎಂ.ಸಿ ನೀರು ಹರಿಸಿ ಕಾಲುವೆಗಳ ಮುಖಾಂತರ ಕೆರೆ-ಕಟ್ಟೆಗಳಿಗೆ ನೀರು ಹರಿಸಿ ಎಂದು ಕೆಳುತ್ತಿದ್ದೇವೆ.
ಈ ಹಿಂದೆಯೂ ರೈತ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ತನ್ನ ನಿಯಮಗಳಿಗೆ ಕಟ್ಟು ಬೀಳದೆ ಬೇಸಿಗೆಯಲ್ಲಿ ಹೇಮಾವತಿ ಜಲಾಶಯದಲ್ಲಿ ಕಡಿಮೆ ನೀರಿನ ಸಂಗ್ರಹವಿದ್ದಾಗಲೂ ಕೆರೆ-ಕಟ್ಟೆಗಳಿಗೆ ನೀರು ಹರಿಸಿದೆ. ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಬಿರು ಬೇಸಿಗೆ ಇರುತ್ತದೆ. ಈ ಅವಧಿಯಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು. ಮೇ ತಿಂಗಳ ಅಂತ್ಯಕ್ಕೆ ಮಳೆಗಾಲ ಆರಂಭವಾಗುತ್ತದೆ.

ಇದು ಎಲ್ಲರಿಗೂ ತಿಳಿದಿರುವ ವಿಚಾರ. ಕನಿಷ್ಠ ಜ್ಞಾನವಿಲ್ಲದವರಿಂದ ರೂಪುಗೊಂಡ ನೀರಾವರಿ ಸಲಹಾ ಸಮಿತಿಯ ನಿರ್ಣಯವನ್ನೆ ಮಾನದಂಡವನ್ನಾಗಿಸಿಕೊಂಡು ಮೇ ತಿಂಗಳ ಅಂತ್ಯದವೆರೆಗೂ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಸದನದಲ್ಲಿ ಸಚಿವರು ಉತ್ತರ ಕೊಡುವುದನ್ನು ರೈತರು ಒಪ್ಪುವುದಿಲ್ಲ. ಹೇಮಾವತಿ ನೀರಿನ ವಿಚಾರದಲ್ಲಿ ಹೇಮಾವತಿ ಜಲಾನಯನ ಪ್ರದೇಶದ ಎಲ್ಲಾ ಶಾಸಕರು ಒಗ್ಗಟ್ಟಿನ ಮಂತ್ರ ಪಠಿಸಿ ಸರ್ಕಾರದ ಹೇಳಿಕೆಯನ್ನು ತಿರಸ್ಕರಿಸಿ ತಕ್ಷಣವೇ ಜಲಾಶಯದಿಂದ ಹೇಮಾವತಿ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸುವಂತೆ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.

ಈ ವೇಳೆ ರೈತ ಮುಖಂಡರಾದ ಎಂ.ವಿ.ರಾಜೇಗೌಡ, ಮರುವನಹಳ್ಳಿ ಶಂಕರ್, ಕರೋಟಿ ತಮ್ಮಯ್ಯ, ನಾಗೇಗೌಡ, ಮುದ್ದುಕುಮಾರ್, ನಗರೂರು ಕುಮಾರ್, ಕೃಷ್ಣಾಪುರ ಮಿಲ್ ರಾಜಣ್ಣ ಸೇರಿದಂತೆ ಹಲವರಿದ್ದರು.
-ಶ್ರೀನಿವಾಸ್ ಆರ್.ಕೆ.ಆರ್.ಪೇಟೆ