ತರೀಕೆರೆ-ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸಿರುವ ಶಾಲಾ ಕಾಂಪೌಂಡ್ ಕುಸಿದಿದ್ದು ಕಾಮಗಾರಿ ಗುಣಮಟ್ಟತೆ ಪರಿಶೀಲಿಸುವ ತನಕ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾ ರದು ಎಂದು ದಸಂಸ ಮುಖಂಡರುಗಳು ತರೀಕೆರೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂಬoಧ ತರೀಕೆರೆ ತಾಲ್ಲೂಕು ಕಚೇರಿ ಸಹಾಯಕರ ಮುಖಾಂತರ ತಹಶೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದ ಮುಖಂಡರುಗಳು ಕಳಪೆಯಿಂದ ಕೂಡಿರುವ ಕಾಮಗಾರಿ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ತಾಲ್ಲೂಕು ಪ್ರಧಾನ ಸಂಚಾಲಕ ಜೆ.ರಾಮಚಂದ್ರ, ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಲಕ್ಷ್ಮಣ್ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನದ 70 ಅಡಿ ಉದ್ದದ ಕಾಂಪೌoಡ್ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿದೆ ಎಂದು ಆರೋಪಿಸಿದರು.
ಉದ್ಯೋಗಖಾತರಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶಾಲಾ ಕಾಂಪೌಂಡ್ ಸೂಕ್ತ ಅಳತೆಯ ಪಾಯಗೊಳಿಸದೇ ನಿರ್ಮಾಣಗೊಂಡಿದೆ.ಈ ಪರಿಣಾಮ ಮೂರ್ನಾಲ್ಕು ದಿನಗಳ ಹಿಂದೆ ಕಾಂಪೌoಡ್‌ನ ತಡೆಗೋಡೆ ಪಾಯ ಸಮೇತ ಕುಸಿದಿದೆ. ಹೀಗಾಗಿ ಗುಣಮಟ್ಟತೆ ಪರಿಶೀಲಿಸಿ ಕಾಮಗಾರಿಯ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದರು.
ಎಂ.ಸಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ನೀಡದೇ ಗುತ್ತಿಗೆ ನೀಡಿ ಕಳಪೆ ಕಾಮಗಾರಿ ಮಾಡಿಸುತ್ತಿರುವ ಗ್ರಾ.ಪಂ. ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೂಡಲೇ ಶಾಲಾ ಕಾಂಪೌoಡ್‌ನ ಗೋಡೆ ಕುಸಿದಿರುವ ಜಾಗಕ್ಕೆ ಕಾಮಗಾರಿಯ ಗುಣಮಟ್ಟ ಪರೀಕ್ಷಿಸುವ ತಂಡವನ್ನು ಸ್ಥಳಕ್ಕೆ ಕರೆಸಿ ಸಮಗ್ರವಾಗಿ ಪರಿಶೀಲಿಸಬೇಕು. ತದನಂತರವೇ ಹೊಸದಾಗಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಮೌಂಟ್ ಫಾಟನ್, ಮಧುಕುಮಾರ್, ಮುಖಂಡರುಗಳಾದ ವಿಕಾಸ್,ಪರಶುರಾಮ್ ಇದ್ದರು.
—————ಸುರೇಶ್