————–ವಸಂತ್ ಗಿಳಿಯಾರ್
ನಿಮ್ಮ ಬದುಕಿನಲ್ಲಿಯೂ ಅವಮಾನವಾಗಿದೆಯಾ? ಅವಮಾನದಿಂದ ಕಣ್ಣೀರಿಟ್ಟಿದ್ದೀರಾ? ತಪ್ಪೇ ಮಾಡದೆ ಅವಮಾನಕ್ಕೆ ಈಡಾಗಿದ್ದೀರಾ? ಕಂಡವರ ಹಿಯಾಳಿಕೆಗೆ ನೀವು ಬೆಂದು ಹೋಗಿದ್ದೀರಾ? ನಿಮ್ಮ ಉತ್ತರ yes ಅಂತ ಆದ್ರೆ ಅದಕ್ಕೆ ನೀವು ಕೊಟ್ಟ ರಿಸಲ್ಟ್ ಯಾವುದು? ನಿಮ್ಮನ್ನ ನೀವೆ ಕೇಳಿಕೊಳ್ಳಿ, ’ಆದ ಅವಮಾನಕ್ಕೆ ನಾನು ಕೊಟ್ಟ ಉತ್ತರ ಯಾವುದು?’ ನಿಮ್ಮದೇ ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವೇ ಸಿಗದೆ ಹೋದರೆ ಇನ್ನೆಲ್ಲಿಯೂ ಹುಡುಕಬೇಡಿ. ಆದ ಅವಮಾನದ ಬಗ್ಗೆಯೇ ಯೋಚಿಸುತ್ತಾ ಕುಸಿದು ಕುಳಿತವರು ಇದನ್ನ ಓದಿಕೊಳ್ಳಲಿ ಎಂದು ಬರೆಯುತ್ತಿದ್ದೇನೆ.
ಯಾರೋ ಮಾಡಿದ ಅವಮಾನಕ್ಕೆ ತನ್ನ ಬದುಕನ್ನೇ ಬಲಿಕೊಟ್ಟು ಬಿಡುವ ಅಥವಾ ವಿನಾಕಾರಣವಾಗಿ ಸೋಲಿನ ಚಕ್ರಸುಳಿಗೆ ಸಿಲುಕಿದವರ ಸಾವಿರ ಉದಾಹರಣೆಗಳು ಕಣ್ಣಮುಂದಿದೆ. ಹಾಗೆಯೇ ಆದ ಅವಮಾನಕ್ಕೆ ಅದೇ ಜಾಗದಲ್ಲೇ ಎದ್ದು, ಗೆದ್ದು ತೋರಿಸಿದ ಅಸಾಮಾನ್ಯ ಸಾಧಕರ ನೂರಾರು ಉದಾಹರಣೆಗೂ ನಮ್ಮ ಮುಂದಿದೆ. ಹಾಗಾಗಿಯೇ ಅವರನ್ನ ಅಸಾಮಾನ್ಯ ಎನ್ನುತ್ತೇವೆ.
ತಿರಸ್ಕೃತರಾದ ಜಾಗದಲ್ಲೇ ಪುರಸ್ಕೃತರಾಗುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಸಾಧ್ಯವಿದೆ ಅಂತಾದವರು ಎಲ್ಲೇ ಇದ್ದರೂ ಅವರು ಯಶಸ್ವಿಗಳು. ಆದ ಅವಮಾನಕ್ಕೆ ಕನಲಿ ಕುಳಿತು ಬದುಕನ್ನ ಇನ್ನಷ್ಟು ಕಂದಕಕ್ಕೆ ತಳ್ಳಿಕೊಳ್ಳುವುದಕ್ಕಿಂತಲೂ ಅದಕ್ಕೊಂದು ದಿಟ್ಟ ಉತ್ತರಕೊಡುವ ನಿಟ್ಟಿನಲ್ಲಿ ಎದ್ದು ನಿಲ್ಲುವ ನಿಲುವಿದೆಯಲ್ಲಾ? ಅದು ನಿಮ್ಮೊಳಗಿದ್ದರೆ ನೀವು ಖಂಡಿತ ಗೆಲ್ಲಬಲ್ಲಿರಿ.
’ಪ್ರತಿಕಾರ’ ಎಂಬ ಮಾತನ್ನ ಬಹಳ ಮುಖ್ಯವಾಗಿ ಓದಿಕೊಳ್ಳಿ.
ಇಲ್ಲಿನ ಪ್ರತಿಕಾರ ಅವಮಾನಿಸಿದವನ ವಿರುದ್ಧ ಯುದ್ಧಕ್ಕೆ ನಿಲ್ಲುವುದಲ್ಲ, ಆತನ ವಿರುದ್ದ ಸೇಡು ತೀರಿಸಿಕೊಳ್ಳುವುದಕ್ಕೆ ಹೊಂಚು ಹಾಕಿ ಕಾಯುವುದಲ್ಲ, ಯಾವ ಕಾರಣಕ್ಕೆ ಅವಮಾನವಾಯಿತೋ ಅದನ್ನ ನೀಗಿಸಿಕೊಂಡು ಬೆಳೆದು ತೋರಿಸುವುದು.
ಹಾಗೆ ಐತಿಹಾಸಿಕ ಉತ್ತರ ಕೊಟ್ಟ ಹಲವು ಕಥೆಗಳಲ್ಲಿ ಎಂದಿಗೂ ನನ್ನನ್ನು ಭಾವನಾತ್ಮಕವಾಗಿ ಬಂಧಿಸುವುದು ಟಾಟ ಕುಟುಂಬದ ಕತೆ. ಈಗ ಉದಾಹರಣೆಗೆ ಟಾಟ ಕುಟುಂಬವನ್ನೇ ನೋಡೋಣ ಭಾರತದಲ್ಲಿ ಕೈಗಾರಿಕ ಕ್ರಾಂತಿಗೆ ಮುನ್ನುಡಿ ಬರೆದದ್ದು ಜೇಮ್ ಶೇಟ್ ಜೀ ಟಾಟ. ಅವರು ಟಾಟ ಸಂಸ್ಥೆಯ ಸಂಸ್ಥಾಪಕರು. 1868 ರಲ್ಲೇ ಭಾರತದಲ್ಲಿ ಕಾಟನ್ ಮಿಲ್ ಆರಂಭಿಸಿದ್ದು ಟಾಟ, ಮುಂದೆ ಉಕ್ಕಿನ ಕಂಪನಿ ಆರಂಭಿಸಲು ಮುಂದಾದಾಗ ಟಾಟ ಸಂಸ್ಥೆ ಮೊತ್ತ ಮೊದಲ ಸಲ ಅವಮಾನ ಎದುರಿಸಿತು. ಟಾಟ ಉತ್ಪಾದನೆ ಮಾಡಿದ ಉಕ್ಕನ್ನು ನಾವು ತಿಂದು ಬಿಡಬಲ್ಲೆವು ಎಂದು ಬ್ರಿಟೀಷ್ ಕಂಪನಿ ಪರಿಹಾಸ್ಯಮಾಡಿತು! ಆದರೆ ಟಾಟಾ ಸ್ಟೀಲ್ ಸ್ಥಾಪನೆ ಮಾಡಿ ಅದು ಜಗತ್ತಿಗೇ ಅದ್ಭುತವಾದ ಉತ್ತರ ಕೊಟ್ಟು ಬಿಟ್ಟಿತು! ಅವಮಾನಿಸಿದವರಿಗೆ ಟಾಟ ಕೊಟ್ಟ ಗೆಲುವಿನ ಉತ್ತರ ಅದಾಗಿತ್ತು.
ಅದೇ ಟಾಟಾರಿಗೆ ಸಂಬಂಧಿಸಿದ ಇನ್ನೊಂದು ಕತೆ ಕೇಳಿ;
ಆ ಕಾಲಕ್ಕೆ ವಿದೇಶಿಯರೇ ತುಂಬಿರುತ್ತಿದ್ದ ಮುಂಬೈನ ಅತ್ಯಂತ ಐಷಾರಾಮಿ ಹೊಟೆಲ್ಲೂ ಜಾಗತಿಕ ಮನ್ನಣೆ ಇದ್ದ ವಾಟ್ಸನ್ ಹೋಟೆಲ್ಲಿಗೆ ಟಾಟಾರಿಗೆ ಒಮ್ಮೆ ಎಂಟ್ರಿಯನ್ನ ನಿರಾಕರಿಸಲಾಗಿತ್ತು. ಆ ಹೊಟೆಲ್ಲಿನ ಮುಂದೆ ’ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ ” ಎಂದು ಬೋರ್ಡ್ ಹಾಕಲಾಗಿತ್ತು ಎನ್ನುತ್ತಾರಾದರೂ ಇಂಗ್ಲೀಷರಿಗೆ ಮತ್ತು ಯೂರೋಪಿಯನ್ನರಿಗೆ ಮಾತ್ರ ಪ್ರವೇಶ ಎಂಬುದು ಆ ಐಷಾರಾಮಿ ಹೊಟೆಲ್ಲಿನ ರೂಲ್ಸ್ ಆಗಿತ್ತು. ಅಂದೇ ಅದೇ ಜಾಗದಲ್ಲೇ ನಿರ್ಣಯ ಮಾಡಿದ್ದರು ಟಾಟ, ’ನಮ್ಮ ಸಂಸ್ಥೆಯೇ ಜಾಗತಿಕ ಮನ್ನಣೆಯ ಹೊಟೆಲ್ ಒಂದನ್ನ ಭಾರತದಲ್ಲೇ ನಿರ್ಮಿಸುತ್ತದೆ ಎಂದು. ಅದಕ್ಕೆ ಅದೇ ಮುಂಬೈ ನಗರದಲ್ಲಿ 1903 ಡಿಸೆಂಬರ್ 14 ರಂದು ಒಂದು ತಾಜ್ ಮಹಲ್ ಪ್ಯಾಲೇಸ್ ಹೆಸರಿನಲ್ಲಿ ಹೋಟೆಲ್ ಒಂದು ತಲೆ ಎತ್ತಿ ನಿಲ್ಲುತ್ತದೆ! ಅದು ಕೇವಲ ಕಟ್ಟಡ ಮಾತ್ರವೇ ಆಗಿರಲಿಲ್ಲ. ಭಾರತೀಯರ ಸ್ವಾಭಿಮಾನವನ್ನ ಕೆಣಕಿದ ಕಾರಣಕ್ಕೆ ಹುಟ್ಟಿದ ಮಹಲ್ ಆಗಿತ್ತು. ಅಂದಿನ ಕಾಲಕ್ಕೇ ಕೋಟಿ ರೂಪಾಯಿ ಸುರಿದು ನಿರ್ಮಿಸಿದ ಅರಮನೆಯಂತಹ ಹೊಟೆಲ್ ಅದು. ಪ್ರಪಂಚದ ನಾನಾ ಭಾಗದಿಂದ ಮುಂಬೈಗೆ ಬಂದು ತಂಗುವುದು ಅದೇ ತಾಜ್ ಹೊಟೇಲಿನಲ್ಲಿ!
ಇದು ಜೇಮ್ ಶೇಟ್ ಜೀ ಟಾಟ ತನಗಾದ ಅವಮಾನಗಳನ್ನ ಮೀರಿ ಬೆಳೆದು ತೋರಿಸಿದ ಸ್ಯಾಂಪಲ್ ಗಳಾದರೆ ನಮ್ಮ ರತನ್ ಟಾಟಾ ಬದುಕಿನ ಒಂದೆರಡು ತುಣುಕುಗಳನ್ನ ಗಮನಿಸೋಣ ಬನ್ನಿ. ಟಾಟ ಸಮೂಹಗಳು ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಟಾಟಾ ಇಂಡಿಕಾ ಕಾರುಗಳನ್ನ ಮಾರುಕಟ್ಟೆಗೆ ಬಿಟ್ಟು ನಷ್ಟವನ್ನ ಅನುಭವಿಸಿದ್ದ ಕಾಲವದು. ಆಗ ಸಂಸ್ಥೆಯನ್ನು ಅಮೇರಿಕಾದ ಪೋರ್ಡ್ ಸಂಸ್ಥೆಗೆ ಮಾರಾಟ ಮಾಡಲು ರತನ್ ಟಾಟಾ ಮತ್ತು ಟೀಮ್ ಅದರ ಮೀಟಿಂಗಿಗಾಗಿ ಅಮೇರಿಕಾಕ್ಕೆ ಹೋದಾಗ ಪೋರ್ಡ್ ಮುಖ್ಯಸ್ತರು ’ನಿಮಗೆ ಕಾರ್ ತಯಾರು ಮಾಡೋದು ಹೇಗೆ ಎಂದು ಗೊತ್ತಿಲ್ಲದ ಮೇಲೆ ಆಟಿಕೆಗಳನ್ನ ಮಾಡಿ ಮಾರಬಹುದಿತ್ತು’ ಎಂದು ತಮಾಷೆಯ ಮಾತಾಡಿ ಬಿಡುತ್ತಾರೆ! ಆ ಮೀಟಿಂಗ್ ಆಗುತ್ತಿರುವ ಹೊತ್ತಿನಲ್ಲೇ ಸಣ್ಣದೊಂದು ಗ್ಯಾಪ್ ಕೇಳಿದ ಟಾಟ ಟೀಮ್, ಅಲ್ಲಿಂದ ಎದ್ದು ಬಂದು ’ನಾವು ಟಾಟಾ ಇಂಡಿಕಾವನ್ನ ಹೇಗಾದರು ಮಾಡಿ ಗೆಲ್ಲಿಸಲೇ ಬೇಕು, ಆ ಮೂಲಕ ಇವರಿಗೆ ಉತ್ತರ ಕೊಡಬೇಕು ಎಂದು ನಿರ್ಧಸಿಬಿಡುತ್ತದೆ, ಮತ್ತೆ ಮೀಟಿಂಗಿಗೆ ಹಾಜರಾದ ಟೀಮ್ ’ನಾವು ನಮ್ಮ ನಿಲುವಿನಿಂದ ಹಿಂದೆ ಬಂದಿದ್ದೇವೆ, ನಮ್ಮ ಕಂಪೇನಿ ಈಗ ಮಾರಾಟಕ್ಕಿಲ್ಲ’ಎಂದು ಬಿಟ್ಟಿತು! ಅದರ ನಂತರ ಟಾಟಾ ಇಂಡಿಕಾ ಕಾರು ಭಾರತದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿಬಿಟ್ಟಿತು! ರಸ್ತೆಯಲ್ಲಿ ಐದು ಕಾರುಗಳು ಓಡಾಡುತ್ತಿದ್ದರೆ ಅದರಲ್ಲಿ ಎರಡು ಟಾಟಾ ಇಂಡಿಕಾ ಎಂಬ ಹವಾ ಸೃಷ್ಠಿಯಾಯಿತು! ಅದಾಗಿ ಕೆಲವೇ ವರ್ಷದಲ್ಲಿ ಅದೇ ಪೋರ್ಡ್ ಕಂಪೇನಿ ನಷ್ಠದ ಸುಳಿಗೆ ಸಿಲುಕಿತು, ಆಗ ಇದೇ ರತನ್ ಟಾಟಾ ಅದನ್ನ ತಾವು ಖರೀಧಿ ಮಾಡುವ ಆಪರ್ ಕೊಡುತ್ತಾರೆ, ಪೋರ್ಡ್ ಕಂಪೇನಿಯ ಮುಖ್ಯಸ್ಥರ ಸರದಿ ಈಗ ಭಾರತದ ಕಡೆಗೆ! ಯಾವ ಸಂಸ್ಥೆಯಿಂದ ಅವಮಾನಗೊಂಡಿದ್ದರೋ ಅದೇ ಸಂಸ್ಥೆಯ ಜಾಗತಿಕ ಬ್ರಾಂಡ್ ಆದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಬ್ರಾಂಡುಗಳ ಕಂಪೇನಿಯ ಖರೀಧಿ ಪತ್ರಕ್ಕೆ ಟಾಟ ಸಹಿ ಮಾಡಿಯೇ ಬಿಡುತ್ತಾರೆ! ಆದ ಅವಮಾನಕ್ಕೆ ಕೊಟ್ಟ ಪ್ರತ್ಯುತ್ತರ ಎಂದರೆ ಅದೇ ಆಗಿತ್ತು.
ಈಗ ಹೇಳಿ; ನಿಮಗಾದ ಅವಮಾನಕ್ಕೆ ಹೇಗೆ ಉತ್ತರ ಕೊಡುತ್ತೀರಿ?
ನೀವು ತೀರಿಸಿಕೊಳ್ಳಬೇಕಾದ ಸೇಡು ಇದೇ. ನಿಮ್ಮ ಗೆಲುವೇ ಉತ್ತರವಾಗಬೇಕೇ ಹೊರತು ಇನ್ನೇನೂ ಅಲ್ಲ. ಜನ ನಿಮ್ಮ ಕಡೆಗೆ ತೂರುವ ಕಲ್ಲುಗಳಿಂದಲೇ ನಿಮ್ಮ ಯಶಸ್ಸಿನ ಕೋಟೆಯನ್ನ ನಿರ್ಮಿಸಿಕೊಳ್ಳಿ ಎಂದಿದ್ದರು ರತನ್ ಟಾಟ. ಆ ಮಾತನ್ನ ಹೇಳುವ ಮೊದಲು ಅದನ್ನ ಮಾಡಿ ತೋರಿಸಿದ್ದ ಅನುಭವ ಅವರ ಬೆನ್ನಿಗಿತ್ತು.
ಅವಮಾನಗಳು ಮನಸಿಗೆ ಆಗುವ ಮಾಗದ ಗಾಯ, ಅದಕ್ಕೆ ಮದ್ದು ಒಂದೇ ಒಂದು, ಅದು ಪ್ರತಿಕಾರ! ನೆನಪಿರಲಿ ಆ ಪ್ರತಿಕಾರ ಹಿಂಸೆಯಿಂದ ಕೂಡಿದ್ದಲ್ಲ. ಆದ ಅವಮಾನಕ್ಕೆ ನಮ್ಮ ಯಶಸ್ಸೇ ಉತ್ತರವಾಗಬೇಕು. ಯಶಸ್ಸು ಸುಮ್ಮನೆ ಬರುವುದಿಲ್ಲ. ಅದಕ್ಕೆ ರಿಸ್ಕ್ ತೆಗೆದುಕೊಳ್ಳಬೇಕು. ಜಗತ್ತಿನ ಅತ್ಯಂತ ದೊಡ್ಡ ರಿಸ್ಕ್ ಎಂದರೆ ಎಂದೂ ರಿಸ್ಕ್ ತೆಗೆದುಕೊಳ್ಳದೇ ಇರುವುದಾಗಿದೆ. ಆದರೆ ನಾವು ತೆಗೆದುಕೊಳ್ಳುವ ರಿಸ್ಕಿನಲ್ಲಿ ಲೆಕ್ಕಾಚಾರವಿರಬೇಕು. ಇದ್ದಕ್ಕಿದ್ದಂತೆ ಏನೋ ಒಂದು ನಿಲುವಿಗೆ ಬಂದು ಬಿಡುವುದು ಸುಲಭ! ಆದರೆ ಅದರ ಬೆನ್ನು ಹತ್ತಿ ಹೋಗುವ ಛಲ ನಮ್ಮೊಳಗಿರಬೇಕು. ಇರಲೇ ಬೇಕು. ಬದುಕಿನಲ್ಲಿ ತೀವ್ರವಾದ ಅವಮಾನಕ್ಕೆ ಈಡಾದ ಎಲ್ಲರೂ ಹಾಗೆ ಗೆಲ್ಲಲಾರರು. ಗೆದ್ದವರನ್ನೇ ಅಸಾಮಾನ್ಯರು ಎನ್ನುವುದು. ಅವಮಾನಕ್ಕೆ ಕೊಡಬಹುದಾದ ಉತ್ತರ ಯಾವುದು ಎನ್ನುವುದು ಅರ್ಥವಾಯಿತಾ?