ತುಮಕೂರು-ಬೇಲೂರಿನ ಚನ್ನಕೇಶವ ಮೂರ್ತಿಗಿಂತಲೂ ಕೈದಾಳದ ಚನ್ನಕೇಶವ ಸುಂದರ ವಿಗ್ರಹ-ಡಾ.ಡಿ.ಎನ್.ಯೋಗೀಶ್ವರಪ್ಪ

ತುಮಕೂರು: ಗೂಳಿಬಾಚಿ ದೇವನಿಂದ ಕ್ರಿ.ಶ. 12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಕೈದಾಳದ ಶ್ರೀ ಚನ್ನಕೇಶವ ದೇವಾಲಯದ ಮೂರ್ತಿ ಬೇಲೂರಿನ ಚನ್ನಕೇಶವನಿಗಿಂತಲೂ ಅತ್ಯಂತ ಸುಂದರವಾಗಿದ್ದು, ಇಲ್ಲಿನ ದೇವಾಲಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರೌಢಿಮೆಯ ಮೇಲೆ ನಿರ್ಮಿಸಲಾಗಿದ್ದು, ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂಜೆಯ ಸಮಯದಲ್ಲಿ ಸೂರ್ಯನ ಬೆಳಕಿನ ಕಿರಣಗಳು ಚನ್ನಕೇಶವ ಮೂರ್ತಿಯ ಪಾದದ ಮೇಲೆ ಬೀಳುವಂತಹ ವ್ಯವಸ್ಥೆ ಮಾಡಿರುವುದು ಅಂದಿನ ಕಾಲದ ಭೌತ ವಿಜ್ಞಾನದ ಪ್ರೌಢಿಮೆಗೆ ಅತ್ಯುತ್ತಮ ಉದಾಹರಣೆಗಾಗಿದೆ. ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು.

ಅವರು ಶ್ರೀ ಸಿದ್ಧಗಂಗಾ ಪದವಿ ಕಾಲೇಜು ಕೈದಾಳದಲ್ಲಿ ಏರ್ಪಡಿಸಿದ್ದ ಎನ್,ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಕ್ಕಣಾಚಾರಿ ನಿರ್ಮಿಸಿದ್ದಾನೆ ಎಂದು ನಂಬಲಾಗಿರುವ ಈ ಚನ್ನಕೇಶವ ಮೂರ್ತಿಯನ್ನು ಕ್ರಿ.ಶ. 1749 ರಲ್ಲಿ ಶತೃಗಳಿಂದ ದಾಳಿಗೊಳಗಾದಾಗ ಮೈಸೂರು ಅರಸರು ಇದನ್ನು ಜೀರ್ಣೊದ್ದಾರ ಮಾಡಿ ಈ ಮೂರ್ತಿಯನ್ನು ಸಂರಕ್ಷಿಸಿದ್ದರು ಎಂದು ತಿಳಿಸಿದ ಅವರು ಕ್ರಿ.ಶ. 2006 ರಲ್ಲಿ ಮತ್ತೊಮ್ಮೆ ಭಿನ್ನವಾಗಿದ್ದುದನ್ನು ನೆನಪಿಸಿಕೊಂಡ ಅವರು ಈ ಸುಂದರ ಮೂರ್ತಿಯ ರಕ್ಷಣೆಗೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಕೈದಾಳ ಸರ್ವ ವಿಧದಿಂದಲೂ ಐತಿಹಾಸಿಕ ಪ್ರವಾಸೋಧ್ಯಮ ಕೇಂದ್ರವಾಗಿ ಪರಿವರ್ತಿಸುವ ಅವಕಾಶವಿದ್ದು ಅಂತರ್ಜಾಲ ಪ್ರವಾಸಿ ಕೈಪಿಡಿಗಳ ಮೂಲಕ ಪ್ರಚಾರ ಮಾಡಿದರೆ ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಅನುಕೂಕಲತೆಗಳನ್ನು ಕಲ್ಪಿಸಿದರೆ ಇದನ್ನು ಉತ್ತಮ ಕೇಂದ್ರವನ್ನಾಗಿ ಬೆಳಸಬಹುದು. ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಇಲಾಖೆ ಇದ್ದರೂ ಅದು ಇಂತಹ ಐತಿಹಾಸಿಕ ಕೇಂದ್ರಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ಗ್ರಾಮಪಂಚಾಯಿತಿ ಸದಸ್ಯರಾದ ಉಮಾಶಂಕರ ಮಾತನಾಡಿ ಈ ಭಾಗದಲ್ಲಿ ಅನೇಕ ಪ್ರಾಚೀನ ಸ್ಮಾರಕಗಳಿದ್ದು ಅವುಗಳು ನಾಶವಾಗುವ ಹಂತ ತಲುಪಿದೆ. ಅಳಿದುಳಿದು ಚಲ್ಲಾಪಿಲ್ಲಿಯಾಗಿ ಬಿದ್ದು ಹೋಗಿರುವ ಪ್ರಾಚ್ಯ ವಸ್ತುಗಳನ್ನೆಲ್ಲಾ ಸಂಗ್ರಹಿಸಿ ಅವುಗಳನ್ನು ಕೈದಾಳದಲ್ಲಿ ಶೇಖರಿಸಿ ವಸ್ತುಸಂಗ್ರಹಾಲವನ್ನು ಮಾಡಿದರೆ ಅದು ಪ್ರವಾಸೋದ್ಯಮಕ್ಕೆ ಪೂರಕವಾಗುತ್ತದೆ. ಇತ್ತಕಡೆ ಪ್ರಾಚ್ಯವಸ್ತು ಇಲಾಖೆ ಗಮನ ಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಟಿ.ಬಿ.ನಿಜಲಿಂಗಪ್ಪ ಮಾತನಾಡಿ ಐತಿಹಾಸಿಕ ಕೇಂದ್ರವಾದ ಕೈದಾಳದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಏರ್ಪಡಿಸಿರುವುದು ವಿದ್ಯಾರ್ಥಿಗಳಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಅರಿವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಆಧುನಿಕತೆಯ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿ ಪರಂಪರೆ ನಶಿಸಿ ಹೋಗುವ ಹಂತ ತಲುಪಿದ್ದು ಅವುಗಳನ್ನು ಉಳಿಸಿ ಬೆಳಸುವ ಅವಶ್ಯಕತೆ ನಮ್ಮ ಯುವ ಸಮುದಾಯದ ಮೇಲಿದೆ ಎಂದರು.

ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಪ್ರೊ.ಸಿ.ಎಸ್.ಸೋಮಶೇಖರ್, ಪಂಚಾಯಿತಿ ಸದಸ್ಯ ರಂಗಸ್ವಾಮಿ ,ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರೇಮ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಓಬಳೇಶ್, ಹನುಮಂತರಾಯಪ್ಪ, ಶಿಬಿರದ ನಿರ್ದೇಶಕರಾದ ಡಾ.ರಂಗನಾಥ್. ಡಾ.ಚಂದ್ರಶೇಖರ್. ಪಲ್ಲವಿ. ಸುಧಾ, ಆರ್. ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *