ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಯುವ ಮುಖಂಡ ನರಸಿಂಹ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ರಾಜ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ನೇತೃತ್ವದ ವಹಿಸಿ ಮಾತನಾಡಿದ ಮುಖಂಡ ಹರಿಹರಪುರದ ನರಸಿಂಹ, ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸಮಾನತೆ, ಸಮಾನ ಅವಕಾಶ ಸಿಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ಸಮಾನತೆ ದೊರೆತಿಲ್ಲ. ಕೆಲವು ಕಡೆ ಅಸ್ಪೃಷ್ಯತೆ ಆಚರಣೆ ಇಂದಿಗೂ ಜೀವಂತವಾಗಿದೆ. ಇದರಿಂದ ದಲಿತ ಬಂಧುಗಳಿಗೆ ನೋವುಂಟಾಗುತ್ತಿದೆ.

ಇದು ತೊಲಗಬೇಕಾದರೆ ಜಾತಿ ವ್ಯವಸ್ಥೆ ದೂರವಾಗಬೇಕು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಯಬೇಕು. ಜಗತ್ತಿನಲ್ಲಿ ಹೆಣ್ಣು ಮತ್ತು ಗಂಡು ಎರಡೇ ಜಾತಿ ಇರಬೇಕು ಎಂಬು ಅಂಬೇಡ್ಕರ್ ಆಶಯವಾಗಿತ್ತು. ಪ್ರಪಂಚದಲ್ಲಿ ಅಂಬೇಡ್ಕರ್ ಅವರಷ್ಟು ಪದವಿಗಳನ್ನು ಪಡೆದವರು ಬೇರೆ ಯಾರೂ ಇಲ್ಲ. ಅಂತಹ ವಿದ್ವತ್ ಅಂಬೇಡ್ಕರ್ ಅವರಲ್ಲಿತ್ತು. ಹಾಗಾಗಿ ವಿಶ್ವಜ್ಞಾನಿಯಾದ ಅಂಬೇಡ್ಕರ್ ಅವರ ಜಯಂತಿಯನ್ನು ಅವರ ಜಯಂತಿಯನ್ನು ಇಂದು ಜಗತ್ತಿನ ಎಲ್ಲಾ ರಾಷ್ಟçಗಳಲ್ಲಿ ಆಚರಿಸಲಾಗುತ್ತಿದೆ ಎಂದರು. ಅಂಬೇಡ್ಕರ್ ಅವರು ಎಂದೂ ಬ್ರಾಹ್ಮಣ ಸಮುದಾಯವನ್ನು ವಿರೋಧಿಸಿಲ್ಲ.

ಅಸಮಾನತೆ ಆಚರಣೆಯನ್ನು ಮಾತ್ರ ಅವರು ವಿರೋಧಿಸುತ್ತಿದ್ದರು. ಅಂಬೇಡ್ಕರ್ ಅವರು ಜೀವನದಲ್ಲಿ ಅನುಭವಿಸಿದ ನೋವನ್ನೂ ಬೇರೆ ಯಾರೂ ಅನುಭವಿಸಲು ಸಾಧ್ಯವಿಲ್ಲ. ನೋವುಂಡು ವಿಷಕಂಠನಾದ ಶಿವನಂತೆ ಅಂಬೇಡ್ಕರ್ ತಾವು ನೋವುಂಡರೂ ದಲಿತ ಸಮುದಾಯ, ಶೋಷಿತ ವರ್ಗ, ಬಡವರು, ಮಹಿಳೆಯರ ಪರವಾಗಿ ಶಾಂತಿ, ಸಹನೆ ಮತ್ತು ತಾಳ್ಮೆಯಿಂದ ಹೋರಾಟ ಮಾಡಿದರು. ಮಹಿಳೆಯರಿಗೆ, ಶೋಷಿತ ವರ್ಗಗಳಿಗೆ ಶಿಕ್ಷಣ ಕೊಡಿಸಿದರು. ಮಹಿಳೆಯರಿಗೆ ಮತದಾನ ಹಕ್ಕು ಮತ್ತು ಸಮಾನತೆ ಕೊಡಿಸಲು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿ ಹೋರಾಟ ಮಾಡಿದ್ದರು. ಈ ಮೂಲಕ ಎಲ್ಲಾ ಜಾತಿ, ಧರ್ಮದವರಿಗೆ ಸಾಮಾಜಿಕ ನ್ಯಾಯ ಸಿಗು ವಂತೆ ಮಾಡಿದರು ಎಂದು ಯುವ ಮುಖಂಡ ನರಸಿಂಹ ಬಣ್ಣಿಸಿದರು.

ಈ ಸಂದರ್ಭದಲ್ಲಿ ಹರಿಹರಪುರ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ರಂಗರಾಮು, ಗೌರವಾಧ್ಯಕ್ಷ ಚೆಲುವರಾಜು, ಕಾರ್ಯದರ್ಶಿ ಹೆಚ್.ಬಿ.ಶಿವಕುಮಾರ್, ನರಸಿಂಹ, ಎನ್.ಪೃಥ್ವಿ, ಂi ಮುಖಂಡರಾದ ಪರ್ವತರಾಜ್, ಕೃಷ್ಣಯ್ಯ ರಾಮಚಂದ್ರು, ಜಗದೀಶ್, ಸುನಿಲ್ ಕುಮಾರ್, ಹೆಚ್.ಆರ್.ವಿಜಯಕುಮಾರ್, ಶೇಖರ್, ವೈರಮುಡಿ, ಬಸವರಾಜ್, ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.