ಎಚ್.ಡಿ.ಕೋಟೆ: ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೆ ಗೇಟ್‌ನಲ್ಲಿರುವ ಶಕ್ತಿ ದೇವತೆ ಮಾಸ್ತಮ್ಮ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ವಿಶ್ವವಿಖ್ಯಾತ ಕಾಕನಕೋಟೆ ಖೆಡ್ಡಾ ನಡೆಸುತ್ತಿದ್ದ ಸ್ಥಳ ಬಳ್ಳೆ ಗೇಟ್‌ನಲ್ಲಿರುವ ಶಕ್ತಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಕಬಿನಿ ಹಿನ್ನೀರಿನಲ್ಲಿರುವ ಹಳೆ ಮಾಸ್ತಿ ಗುಡಿಗೆ ಅರ್ಚಕ ವೀರಭದ್ರಪ್ಪ ವಿಶೇಷ ಪೂಜೆ ಸಲ್ಲಿಸಿ ನಂತರ ಕಬಿನಿ ಹಿನ್ನೀರಿನಿಂದ ಮಹೇಂದ್ರ, ಲಕ್ಷ್ಮಿ ಆನೆಗಳ ಮೇಲೆ ಕಲಶವನ್ನು, ಮಂಗಳವಾಧ್ಯ, ಚಂಡೆಮೇಳ, ಸತ್ತಿಗೆ, ಸೂರಿಪಾನಿಗಳನ್ನು ಹೊತ್ತು ಮೆರವಣಿಗೆ ಮೂಲಕ ದೇವಾಲಯ ತಲುಪಿತು ನಂತರ ಮಾಸ್ತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾವಿರಾರು ಭಕ್ತಾದಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಅನ್ನ ಸಂತರ್ಪಣೆ ನೆರವೇರಿಸಲಾಗಿತ್ತು, ಜಾತ್ರೆಯ ಅಂಗವಾಗಿ ತಿಂಡಿ, ತಿನಿಸು ಇತರೆ ಅಂಗಡಿಗಳನ್ನ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತೆ ಕ್ರಮ ವಹಿಸಿದ್ದರು, ಅಂಗಡಿ ಮುಂಗಟುಗಳನ್ನು ಉದ್ದೂರು ಗೇಟ್ ಸಮೀಪ ನಿರ್ಮಿ-ಸಲಾಗಿತ್ತು. ಬಳ್ಳಿಯಲ್ಲಿ ವಿಶ್ವ ವಿಖ್ಯಾತ ಕಾಕನಕೋಟೆ ಖೆಡ್ಡಾ ನಡೆಸುತ್ತಿದ್ದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸೇರಿದಂತೆ ಶಕ್ತಿ ದೇವತೆ ಮಾಸ್ತಮ್ಮನಿಗೆ ಮೊದಲಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಚರಣೆಯ ನಡೆಸುತ್ತಿದ್ದರು.

ಇತಿಹಾಸ: ವರನಟ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ఎంపి ಶಂಕರ್, ಗಂಧದಗುಡಿ ಚಿತ್ರೀಕರಣ ಸಂದರ್ಭದಲ್ಲಿ, ಪೂಜೆ ಸಲ್ಲಿಸಿ ನಂತರ ಚಿತ್ರೀಕರಣ ಆರಂಭಿಸಿದ್ದರು.
ಬಳ್ಳೆ ಆನೆ ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಅನೆಗಳನ್ನು ಸಾಕಲಾಗಿತ್ತು. ಆನೆಗಳು ವಿಶ್ವವಿಖ್ಯಾತ ದಸರಾ ಹಬ್ಬದಲ್ಲಿ ಜಂಬೂ ಸವಾರಿಯನ್ನು ಹೊತ್ತಿದ್ದ ಐರಾವತ, ದ್ರೋಣ, ಅರ್ಜುನ ಇತ್ಯಾದಿ ಆನೆಗಳಿಗೆ ಮಾಸ್ತಮ್ಮನ ಅಶೀರ್ವಾದ ಇತ್ತು’ ಎಂದು ಈ ಭಾಗದ ಜನತೆ ಹೇಳುತ್ತಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೆ ಗೇಟ್ ನಲ್ಲಿರುವ ಶಕ್ತಿದೇವತೆ ಮಾಸ್ತಮ್ಮ ಜಾತ್ರಾ ಮಹೋತ್ಸವದ ಮೆರವಣಿಗೆಗೆ ದಸರಾ ಆನೆಗಳಾದ ಮಹೇಂದ್ರ, ಲಕ್ಷ್ಮಿ ಮೆರುಗು ನೀಡಿದವು.
– ಶಿವಕುಮಾರ, ಎಚ್.ಡಿ.ಕೋಟೆ