ಕೆ.ಆರ್.ಪೇಟೆ: ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ ಕ್ಷೇತ್ರದ ಅಭಿವೃದ್ದಿಗೆ ರಾಜ್ಯ ಸರ್ಕಾರ ಪಕ್ಷ ರಾಜಕಾರಣ ಮಾಡದೆ 120 ಕೋಟಿ ರೂ ಅನುದಾನ ನೀಡಿದೆ ಎಂದು ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ “ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಿಂದ ತಾಲೂಕಿನ 63 ಕೆರೆಗಳು ಹೇಮಾವತಿ ನೀರಿನಿಂದ ತುಂಬಲಿದ್ದು ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಈ ಯೋಜನೆಯ ಮೂಲಕ ನಾಗಮಂಗಲ ಕ್ಷೇತ್ರಕ್ಕೂ ಹೇಮೆಯ ನೀರನ್ನು ತೆಗೆದುಕೊಳ್ಳಲು 80 ಕೋಟಿ ಅನುದಾನದ ಅಗತ್ಯವಿದ್ದು ಶೀಘ್ರದಲ್ಲಿಯೇ ಅದನ್ನು ಬಿಡುಗೆ ಮಾಡಲಾಗುವುದು. ಇದಲ್ಲದೆ ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ 120 ಕೋಟಿ ರೂ ಅನುದಾನ ನೀಡಲಾಗಿದೆ.

ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ ಎನ್ನುವ ಕೊರಗು ಇಲ್ಲಿನ ಕಾರ್ಯಕರ್ತರನ್ನು ಕಾಡುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. 2028 ರ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿರಬೇಕು ಎನ್ನುವುದು ನನ್ನ ಗುರಿಯಾಗಿದೆ. ಪಕ್ಷದ ಕಾರ್ಯಕರ್ತರು ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಶ್ರಮಿಸಬೇಕು. ಕಾರ್ಯಕರ್ತರಿಗೆ ಅಗತ್ಯವಾದ ಶಕ್ತಿ ತುಂಬುವ ಕೆಲಸವನ್ನು ಸಚಿವನಾಗಿ ನಾನು ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್ ಮಾತನಾಡಿ ರೈತರ ಹಿತದೃಷ್ಠಿಯಿಂದ ಹೇಮಾವತಿ ಜಲಾಶಯದಿಂದ ತಾಲೂಕಿನ ನಾಲೆಗಳಿಗೆ ಒಂದು ಕಂತು ನೀರು ಬಿಡಿಸಿಕೊಡಬೇಕು. ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹೇಮಾವತಿ ಬಡಾವಣೆಯ 582 ನಿವೇಶನಗಳ ಸಕ್ರಮಾತಿಗೆ ಕ್ರಮ ವಹಿಸಬೇಕು. ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ರಸ್ತೆಗೆ ಪರ್ಯಾಯವಾಗಿ ರೈತರಿಗೆ ಹೊಸ ರಸ್ತೆ ನಿರ್ಮಿಸಿಕೊಡಬೇಕು. 287ಸರ್ವೆ ನಂಬರಿನಲ್ಲಿ ಪಟ್ಟಣದ ಕಡುಬಡವರಿಗೆ ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು.
ನಿವೇಶನಕ್ಕಾಗಿ ಅಭಿವೃದ್ದಿ ಶುಲ್ಕವನ್ನು ಬಡವರು ಸುಮಾರು 20ವರ್ಷಗಳ ಹಿಂದೆಯೇ ಪುರಸಭೆಗೆ ಕಟ್ಟಿ ನಿವೇಶನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅವರಿಗೆ ಆದಷ್ಟು ಬೇಗ ನಿವೇಶನಗಳನ್ನು ವಿತರಣೆ ಮಾಡಲು ಕ್ರಮ ವಹಿಸಬೇಕು. ಕಳೆದ ಎರಡು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಒಡೆದು ಹೋಗಿರುವ ಸಂತೇಬಾಚಹಳ್ಳಿ, ಕಿಕ್ಕೇರಿ ಹೋಬಳಿಯ ವಿವಿಧ ಕೆರೆ ಕಟ್ಟೆಗಳು, ಸೇತುವೆಗಳನ್ನು ದುರಸ್ತಿ ಮಾಡಲು ತಕ್ಷಣವೇ ಅನುದಾನ ನೀಡಬೇಕು. ಗೂಡೇಹೊಸಹಳ್ಳಿ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂತೇಬಾಚಹಳ್ಳಿ ಹೋಬಳಿಯ ರೈತರ ಅಭಿವೃದ್ದಿಗೆ ನೆರವಾಗುವಂತೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ರಮೆಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಬಿ.ಎಲ್.ದೇವರಾಜು, ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಶೀಳನೆರೆ ಅಂಬರೀಶ್, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಪುರಸಭೆ ಅಧ್ಯಕ್ಷೆ ಪಂಕಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡ ಚಿದಂಬರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಕುಮಾರ್, ಪುರಸಭಾ ಸದಸ್ಯರಾದ ಡಿ.ಪ್ರೇಮ್‌ಕುಮಾರ್, ಹೆಚ್.ಎನ್.ಪ್ರವೀಣ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ವೇದಿಕೆಯಲ್ಲಿದ್ದರು.
— ಶ್ರೀನಿವಾಸ್ ಆರ್.