ಹೊಳೆನರಸೀಪುರ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನವನ್ನಾಗಿ ಪರಿವರ್ತಿಸಿಕೊಂಡು ಖಾತೆ ಮಾಡಿಸಿಕೊಳ್ಳದಿರುವವರು, ಜಮೀನಿನ್ನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದ ಸೂಚನೆಯಂತೆ ಎ, ಖಾತೆ ಮತ್ತು ಬಿ. ಖಾತೆ ಮಾಡಿಕೊಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಶಿವಶಂಕರ್ ತಿಳಿಸಿದರು.
ಗುರುವಾರ ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಪುರಸಭೆ ವ್ಯಾಪ್ತಿಯಲ್ಲಿ 8273 ಆಸ್ತಿ ಇದ್ದು ಅದರಲ್ಲಿ 6833 ಆಸ್ತಿಗಳ ಮಾಲೀಕರು ಈಸ್ವತ್ತು ಮಾಡಿಸಿಕೊಂಡಿದ್ದಾರೆ. ಇನ್ನುಳಿದಂತೆ 1441 ಅಸ್ತಿ ಮಾಲೀಕರು ಎ. ಖಾತೆ ಮತ್ತು ಬಿ.ಖಾತೆ ಯಾವುದನ್ನೂ ಮಾಡಿಸಿಕೊಂಡಿಲ್ಲ. ಸರ್ಕಾರ ಇವರೆಲ್ಲರಿಗೆ ಒಂದು ಒಳ್ಳೆಯ ಅವಕಾಶ ನೀಡಿದ್ದು ನಿಮ್ಮ ಆಸ್ತಿಗೆ ಸಂಬಂಧ ಪಟ್ಟ ಖಾತೆ ಮಾಡಿಸಿಕೊಳ್ಳಿ ಎಂದರು.
ಪುರಸಭೆಯ ರಮೇಶ್ ಮಾತನಾಡಿ ಸಕ್ಷಮ ಪ್ರಾಧಿಕಾರಗಳಿಂದ ನಿವೇಶನ ಪಡೆದು ಖಾತೆ ಮಾಡಿಸಿಕೊಳ್ಳಲಿದ್ದರೆ ಅತಂಹವರಿಗೆ ಎ. ಖಾತೆ, ತಮ್ಮ ಜಮೀನು, ಖರೀದಿಸಿದ ನಿವೇಶನಕ್ಕೆ ಖಾತೆ ಮಾಡಿಸಿಕೊಳ್ಳದಿದ್ದರೆ, ಬಿ. ಖಾತೆ ಮಾಡಿಸಿಕೊಳ್ಳುವ ಅವಕಾಶ ಇದೆ. ಎ. ಖಾತೆ ಮಾಡಿಸಿಕೊಳ್ಳಬಯಸುವವರು ಫೆಬ್ರವರಿ 25 ಕ್ಕೆ ಮುನ್ನ, ಬಿ ಖಾತೆ ಮಾಡಿಸಿಕೊಳ್ಳುವವರು ಮೇ 10 ಕ್ಕೆ ಮುನ್ನ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕ ಪಾವತಿಸಿ ರಶೀತಿ ಪಡೆದು ನಿಮ್ಮ ಮನೆ ಹಾಗೂ ನಿವೇಶನಗಳಿಗೆ ಖಾತೆ ಮಾಡಿಸಿಕೊಳ್ಳಿ ಎಂದರು.

ಪುರಸಭಾಧ್ಯಕ್ಷ ಕೆ. ಶ್ರೀಧರ್ ಮಾತನಾಡಿ ಸರ್ಕಾರ ಖಾತೆ ಮಾಡಿಸಿಕೊಳ್ಳದಿರುವವರಿಗೆ ಒಳ್ಳೆ ಅವಕಾಶ ನೀಡಿದೆ. ಈ ಬಗ್ಗೆ ನಾವು ವ್ಯಾಪಾಕ ಪ್ರಚಾರ ನೀಡುತ್ತಿದ್ದೇವೆ. ಎಲ್ಲರೂ ಸಕಾಲದಲ್ಲಿ ಅರ್ಜಿ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಿ. ಇದರಿಂದ ನೀರು, ವಿದ್ಯುತ್, ಒಳಚರಂಡಿ ಸೌಲಭ್ಯ ಕಲ್ಪಿಸಲು ನಮಗೆ ಅವಕಾಶ ಸಿಗುತ್ತದೆ.
ಪುರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಖಾತೆ ಮಾಡಿಕೊಟ್ಟು ರಾಜ್ಯದಲ್ಲಿ ಮೊದಲ ಸ್ಥಾನಗಳಿಸಲು ಸಿದ್ದತೆ ನಡೆಸಿದ್ದೇವೆ. ನಮ್ಮ ಪುರಸಭಾ ಸಿಬ್ಬಂದಿ ಈಗಾಗಲೇ ಕಾರ್ಯೋನ್ಮುಕರಾಗಿದ್ದಾರೆ. ನೀವೆಲ್ಲಾ ಸಹಕರಿಸಿ. ನಿಮ್ಮ ಮನೆ ಅಥವಾ ನಿವೇಶನಗಳಿಗೆ ಖಾತೆ ಮಾಡಿಸಿಕೊಂಡರೆ ಅದಕ್ಕೆ ಉತ್ತಮ ಬೆಲೆ ಸಿಗುತ್ತದೆ ಎಂದು ಪುರಸಭಾ ಸದಸ್ಯರಾದ ಪ್ರಸನ್ನ, ನಿಂಗಯ್ಯ, ಎ. ಜಗನ್ನಾಥ್ ತಿಳಿಸಿ, ಪಟ್ಟಣದ ಮೂರು ಸ್ಥಳಗಳಲ್ಲಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸದಸ್ಯರಾದ ಉಮೇಶ್,ಕುಮಾರ್ ಹೇಮಂತ್, ಸುನಿಲ್ ಭಾಗವಹಿಸಿದ್ದರು