ತುಮಕೂರು-ಬಸ್ ದರ ಏರಿಕೆ-ಸರಕಾರದ ಬೊಕ್ಕಸ ಬರಿದಾಗಿರುವು ದಕ್ಕೆ ಸಾಕ್ಷಿ-ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳ ನಿಗದಿಗೆ ಶಾಸಕ ಬಿ.ಸುರೇಶ್ ಗೌಡ ಆಗ್ರಹ

ತುಮಕೂರು-ರಾಜ್ಯ ಸರ್ಕಾರ ಹೊಸ ವರ್ಷದ ಎರಡನೇ ದಿನವೇ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದ್ದು ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಹಣದ ಕೊರತೆಯಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಮುಖ್ಯಮಂತ್ರಿಗಳು ಈಗ ಸರ್ಕಾರದ ಬೊಕ್ಕಸ ಬರಿದಾಗಿರುವುದನ್ನು ತಾವೇ ಒಪ್ಪಿಕೊಂಡಂತಾಗಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡ ಲೇವಡಿ ಮಾಡಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್‌ಗಳು ಮಾತ್ರವಲ್ಲದೆ ಬಿಎಂಟಿಸಿ ಬಸ್‌ ದರವನ್ನೂ ಏರಿಸಿರುವುದರಿಂದ ಸಾಮಾನ್ಯ ಜನರಿಗೆ ತೀವ್ರ ಹೊರೆಯಾಗಲಿದೆ. ಈ ಸರ್ಕಾರ ಕಳೆದ ವರ್ಷದಲ್ಲಿ ಪೆಟ್ರೋಲ್‌ ಮತ್ತು ಡೀಸಲ್‌ ದರ ಏರಿಸಿತ್ತು. ಮದ್ಯದ ದರ ಏರಿಸಿತ್ತು. ಬಿಪಿಎಲ್‌ ಕಾರ್ಡ್‌ಗಳ ಸಂಖ್ಯೆಯನ್ನು ಕಡಿತ ಮಾಡಲು ಹೊರಟಿತ್ತು. ಇದನ್ನೆಲ್ಲ ನೋಡಿದರೆ ಈ ಸರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕರುಣೆ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಕುಟುಕಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ನೀಡಿದರೆ ಅದರಿಂದ ಅವರಿಗೆ ನಿಜವಾದ ಪ್ರಯೋಜನವಾಗುತ್ತದೆ. ಎರಡನೆಯದಾಗಿ ಸರ್ಕಾರದ ಬೊಕ್ಕಸದ ಮೇಲಿನ ಅನಗತ್ಯ ಹೊರೆ ಕಡಿಮೆಯಾಗುತ್ತದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೋ ಹಟಕ್ಕೆ ಬಿದ್ದವರಂತೆ ಗ್ಯಾರಂಟಿ ಯೋಜನೆಗಳನ್ನು ಇಡಿಯಾಗಿ ಸಮರ್ಥಿಸಿಕೊಳ್ಳುತ್ತಿದ್ದು ಅವುಗಳ ಮರುಪರಿಶೀಲನೆಗೆ ಅವರು ಒಪ್ಪುತ್ತಲೇ ಇಲ್ಲ. ಅದರಿಂದ ಅವರಿಗೆ ಏನು ಖ್ಯಾತಿ ಸಿಗುತ್ತದೆಯೋ ಬಿಡುತ್ತದೆಯೋ ತಿಳಿಯದು. ಆದರೆ, ಸಾಮಾನ್ಯ ಜನರ ಬದುಕಂತೂ ನರಕವಾಗುವುದು ಖಂಡಿತ. ʻಶಕ್ತಿʼ ಯೋಜನೆಯಿಂದ ಹೆಣ್ಣು ಮಕ್ಕಳು ಉಚಿತ ಪಯಣ ಮಾಡುವ ಭಾಗ್ಯ ಗಳಿಸಿದ್ದಾರೆ. ಆದರೆ, ಅದರ ಹೊರೆಯನ್ನು ಈಗ ಪುರುಷರು ಹೊರಬೇಕಾಗಿ ಬಂದಿದೆ. ಸಾಮಾನ್ಯ ಕೆಂಪು ಬಸ್‌ಗಳಲ್ಲಿ ಪರುಷ ಪ್ರಯಾಣಿಕರಿಗೆ ಈಗ ನಿಂತು ಹೋಗಲೂ ಜಾಗವಿಲ್ಲದಂಥ ಸ್ಥಿತಿ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರದಲ್ಲಿ ಗುತ್ತಿಗೆದಾರರು ರೈಲು ಹಳಿಯ ಮೇಲೆ ತಲೆ ಇಟ್ಟುಕೊಂಡು ಸಾಯುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ಇದರಲ್ಲಿ ತಳಕು ಹಾಕಿಕೊಂಡಿದೆ. ಈ ಸರ್ಕಾರದಲ್ಲಿ ಸರ್ಕಾರಿ ನೌಕರರು ಸರ್ಕಾರಿ ಕಚೇರಿಗಳಲ್ಲಿಯೇ ನೇಣು ಬಿಗಿದುಕೊಂಡು ಸಾಯುತ್ತಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರ ಹೆಸರು ತಳಕು ಹಾಕಿಕೊಂಡಿದೆ. ಆದಾಗ್ಯೂ ಇಬ್ಬರೂ ಸಚಿವರು ಈ ಸಾವುಗಳು ತಮಗೆ ಏನೂ ಸಂಬಂಧವೇ ಇಲ್ಲವೆಂಬಂತೆ ನಿರ್ಲಜ್ಜವಾಗಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಸುರೇಶ ಗೌಡ ಟೀಕಿಸಿದ್ದಾರೆ.

ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಹಿರಿಯ ಉದ್ಯಮಿ ಮೊಹನದಾಸ್‌ ಪೈ ಅವರು ಈಚೆಗೆ ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು ನೂರಕ್ಕೆ ನೂರು ಸತ್ಯ. ಆದರೆ, ಈ ಸರ್ಕಾರ ಎಷ್ಟು ಭಂಡಬಿದ್ದಿದೆ ಎಂದರೆ ಅವರ ಟೀಕೆಗೆ ಉತ್ತರ ಕೊಡುವ ಕನಿಷ್ಠ ಸೌಜನ್ಯವನ್ನೂ ಅದು ತೋರಿಸಿಲ್ಲ. ಯಾರು ಏನು ಹೇಳಿದರೇನು ಎನ್ನುವಂತೆ ಈ ಸರ್ಕಾರದ ಧೋರಣೆ ಇದ್ದಂತೆ ಇದೆ. ಆದರೆ, ಸರ್ಕಾರದಲ್ಲಿ ಇದ್ದವರ ಹುಸಿ ಪ್ರತಿಷ್ಠೆಗೆ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾಗುವುದನ್ನು ನೋಡುತ್ತ ನಮ್ಮ ಪಕ್ಷ ಸುಮ್ಮನೆ ಇರುವುದು ಸಾಧ್ಯವಿಲ್ಲ. ಬೀದಿಗೆ ಇಳಿದು ನಾವು ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?